ಗದಗ 21: ವೈದ್ಯರು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದು ಅಂಗವಿಕಲರಿಗೆ ಆದ್ಯತೆ ನೀಡಿ ಸರಿಯಾದ ಚಿಕಿತ್ಸೆ ನೀಡಬೇಕು. 1995ರ ಹಾಗೂ 2016ರ ಅಂಗ ವಿಕಲರ ಕಾಯ್ದೆ ಮಾರ್ಗಸೂಚಿಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ನಿರ್ದೇಶನ ನೀಡಿದರು.
ಗದಗ ಸಕರಾರಿ ಜಿಲ್ಲಾ ಆಸ್ಪತ್ರೆಯಲ್ಲಿಂದು ಜರುಗಿದ 2016ರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಅರಿವು ಮೂಡಿಸುವ ಹಾಗೂ 1995ರ ಅಂಗವಿಕಲರ ಅಧಿನಿಯಮದ ಅನುಷ್ಠಾನ ಮತ್ತು ಅಂಗವಿಕಲರ ಹಕ್ಕುಗಳ ಸಂರಕ್ಷಣೆ ಕುರಿತು ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಜಾರಿಯಲ್ಲಿರುವ 1995ರ ಹಾಗೂ 2016ರ ಅಂಗವಿಕಲರ ಕಾಯ್ದೆಯನ್ವಯ ವಿಕಲಾಂಗರಿಗೆ ದೊರೆಯಬೇಕಾದ ಸೌಕರ್ಯಗಳು ಅವರ ಮೂಲಭೂತ ಹಕ್ಕುಗಳಾಗಿವೆ. ಪ್ರತಿ ಇಲಾಖೆಯಲ್ಲಿಯೂ ವಿಕಲಾಂಗರಿಗಾಗಿ 5% ಅನುದಾನ ಮೀಸಲಿಡಲಾಗಿದೆ. ಜಿಲ್ಲಾಸ್ಪತ್ರೆ ತ್ರೈಮಾಸಿಕವಾಗಿ ನುರಿತ ತಜ್ಞ ವೈದ್ಯರನ್ನೊಳಗೊಂಡ ಅಂಗವಿಕಲರ ಶಿಬಿರಗಳನ್ನು ಆಯೋಜಿಸಲು ಸೂಚಿಸಿಬೇಕು. ಗುರುತಿಸಲಾದ ಅಂಗವಿಕಲ ಮಕ್ಕಳಿಗೆ ಸೂಕ್ತ ಚಿಕಿತ್ಸೆ, ಪಾಲಕರಿಗೆ ಅಗತ್ಯದ ತರಬೇತಿ ನೀಡಲು ಹಾಗೂ ಅವರಿಗೆ ಬೇಕಾದ ಸಾಧನ ಸಲಕರಣೆಗಳ ಖರೀದಿಗಾಗಿ ಶೇ5 ರ ಅನುದಾನದಲ್ಲಿ ಒದಗಿಸಲು ಆಯುಕ್ತರು ಸೂಚಿಸಿದರು.
ವಿಕಲಾಂಗ ಮಗುವನ್ನು ಮುಖ್ಯ ವಾಹಿನಿಗೆ ತರಲು ಮಾನಸಿಕವಾಗಿ ಸಿದ್ಧತೆ ಮಾಡುವಲ್ಲಿ ಶಿಕ್ಷಣ ಇಲಾಖೆ ಪಾತ್ರ ಮಹತ್ವದಾಗಿದೆ ಇಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯದ ತರಬೇತಿ ಹಾಗೂ ವ್ಶೆದ್ಯರಿಂದ ಚಿಕಿತ್ಸೆ ಒದಗಬೇಕು. ವಿಕಲಾಂಗರಿಗೆ ಪಿಂಚಣಿ ಜೊತೆಗೆ ಅವರ ಭವಿಷ್ಯವನ್ನು ರೂಪಿಸಬೇಕಾಗಿದೆ ಈ ಕಾರ್ಯಕ್ಕೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಿಕಲಾಂಗರ ಕುರಿತು ಸುಳ್ಳು ಪ್ರಮಾಣ ಪತ್ರ ಒದಗಿಸಿದ್ದು ಕಂಡು ಬಂದಲ್ಲಿ ಸಂಬಂಧಿಸಿದ ವೈದ್ಯಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ ಎಂದು ವಿ.ಎಸ್.ಬಸವರಾಜು ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಶಗಿ, ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಸಹಾಯಕ ಉಪಾಯುಕ್ತ ಎಸ್.ಕೆ.ಪದ್ಮನಾಬ, ಜಿಲ್ಲಾ ಶಸ್ತ್ರ ಚಿಕಿತ್ಸಕ ಬಿ.ಸಿ.ಕರಿಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪನಿರ್ದೇಶಕಿ ಅಕ್ಕಮಹಾದೇವಿ, ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ಎಮ್.ಗೊಜನೂರ, ವಿಕಲಚೇತನರ ಕಲ್ಯಾಣಾಧಿಕಾರಿ ಆಶು ನದಾಫ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಜಿ.ಎಲ್.ಬಾರಾಟಕ್ಕೆ, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಬಿ.ಆರ್.ಸಿ, ಎಂ.ಆರ್.ಡಬ್ಲೂ ಹಾಗೂ ಯು.ಆರ್.ಡಬ್ಲೂಗಳು ಸಭೆಯಲ್ಲಿ ಭಾಗವಹಿಸಿದ್ದರು.