ಲೋಕದರ್ಶನ ವರದಿ
ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮೂರು ವಾಡರ್್ಗಳ ಪ್ರತ್ಯಕ್ಷ ದರ್ಶನವನ್ನು ಪಾಲಿಕೆ ಅಧಿಕಾರಿಗಳಿಗೆ ಮಾಡಿಸಿದ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಾಡರ್್ಗಳ ಅಭಿವೃದ್ಧಿಗೆ ನಿರ್ಲಕ್ಷ ಮಾಡಿದರೆ ಸಹಿಸೋದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬಾಕ್ಸೈಟ್ ರಸ್ತೆ ಪಕ್ಕದ ಅನೇಕ ಬಡಾವಣೆಗಳು ಬಿ. ಕೆ. ಕಂಗ್ರಾಳಿ ಪ್ರದೇಶ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿ ಸರಿಯಾದ ರಸ್ತೆಗಳಿಲ್ಲ, ಈ ಪ್ರದೇಶಕ್ಕೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ, ಈ ಪ್ರದೇಶದ ಕಸ ವಿಲೇವಾರಿಯ ಕಡೆ ಪಾಲಿಕೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ಎದುರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಸಮಾಧಾನ ವ್ಯಕ್ತ ಪಡಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಕಸಕೊಪ್ಪ ಜಲಾಶಯದಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಆಗುತ್ತದೆ. ಆದರೆ ಗ್ರಾಮೀಣ ಕ್ಷೇತ್ರದ ಬಡಾವಣೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ, ಬೆಳಗಾವಿ ಗ್ರಾಮೀಣ ಕ್ಷೇತ್ರದ ತುರಮರಿಯಲ್ಲಿ ಬೆಳಗಾವಿ ನಗರದ ಕಸ ಡಂಪ್ ಮಾಡ್ತೀರಾ, ಆದರೆ ಬೆನಕನಹಳ್ಳಿ ಹಿಂಡಲಗಾ ಪ್ರದೇಶದ ಕಸ ವಿಲೇವಾರಿ ಮಾಡುವುದಿಲ್ಲ. ಇದೆಂಥಾ ವ್ಯವಸ್ಥೆ ಇದೇ ಪರಿಸ್ಥಿತಿ ಮುಂದುವರೆದರೆ ಕ್ಷೇತ್ರದ ಜನ ರೊಚ್ಚಿಗೆದ್ದರೆ ಅದಕ್ಕೆ ನಾನು ಹೊಣೆಯಲ್ಲ, ಬೆಳಗಾವಿ ಗ್ರಾಮೀಣ ಕ್ಷೇತ್ರ ಕಸದ ತೊಟ್ಟಿ ಅಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದಾದ ಬಳಿಕ ಪಾಲಿಕೆ ಹಾಗೂ ನೀರು ಸರಬರಾಜು ಮಂಡಳಿಯ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಬಡಾವಣೆಗಳಿಗೆ ಸಮರ್ಪಕ ನೀರು ಪೂರೈಕೆಗೆ 60 ಲಕ್ಷ ರೂ. ಅನುದಾನದ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಅಧಿಕಾರಿಗಳಿಗೆ ಸೂಚನೆ ನೀಡಿದರು.