ಬೆಂಗಳೂರು, ಸೆ 17 'ಪೈಲ್ವಾನ್' ಪೈರಸಿಯಿಂದ ಸಾಮಾಜಿಕ ಜಾಲತಾಣದಲ್ಲಿ ದಚ್ಚು, ಕಿಚ್ಚ ಕಾಳಗ ಕಾವೇರುತ್ತಿದೆ ಫ್ಯಾನ್ಸ್ ಗಳು ಮಾತ್ರ ನಡೆಸುತ್ತಿದ್ದ ವಾಕ್ಸಮರಕ್ಕೆ ಇದೀಗ ಸ್ವತಃ ದರ್ಶನ್ ಎಂಟ್ರಿ ಕೊಟ್ಟಿದ್ದಾರೆ
ನನ್ನ ಅನ್ನದಾತರಾದ ಫ್ಯಾನ್ಸ್ ಗಳ ತಂಟೆಗೆ ಬರದಿರಿ ಎಂದು ಮಂಗಳವಾರ ಜಾಲತಾಣದ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ
ಫ್ಯಾನ್ಸ್ ವಾರ್ ನಿಂದ ಫುಲ್ ಗರಂ ಆಗಿರುವ ಅವರು, ಫ್ಯಾನ್ಸ್ ಗಳನ್ನು ಕೆಣಕಲು ಯಾರೂ ಮುಂದಾಗಬೇಡಿ, ಪ್ರಚೋದನೆ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು. ನನ್ನ ಅನ್ನದಾತರು ಸೆಲೆಬ್ರಿಟಿಗಳನ್ನು ಕೆಣಕಲು/ ಪ್ರಚೋದಿಸಲು ಬರದಿರಿ ಎಂದು ದರ್ಶನ್ ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು ಮತ್ತು ಸುದೀಪ್ ಅಭಿಮಾನಿಗಳ ಮಧ್ಯೆ ಸಿನಿಮಾ ಬಗೆಗಿನ ಅಪಪ್ರಚಾರ, ಪೈರಸಿ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಆದರೆ ಪೈರಸಿ ವಿಚಾರದಲ್ಲಿ ದರ್ಶನ್ ಅಭಿಮಾನಿಗಳ ತಪ್ಪಿಲ್ಲ ಎಂದು ಸ್ವತಃ 'ಪೈಲ್ವಾನ್' ಚಿತ್ರದ ನಿರ್ಮಾಪಕಿ ಸ್ವಪ್ನಾ ಕೃಷ್ಣ ಹೇಳಿದ್ದರು.
ತಮ್ಮ ಬಗ್ಗೆ ಬಂದ ಆರೋಪದ ಬಗ್ಗೆ ದರ್ಶನ್ ಅಭಿಮಾನಿಗಳು " ತಮ್ಮ ತಪ್ಪಿಲ್ಲ. ಯಾರೋ ಮಾಡಿದ ತಪ್ಪಿಗೆ ನಮ್ಮನ್ನು ದೂಷಿಸಬೇಡಿ. ಪೈರಸಿ ಮಾಡಿರುವುದು ನಾವಲ್ಲ" ಎಂದು ಬಹಿರಂಗ ಪತ್ರ ಬರೆದಿದ್ದರು.
ದರ್ಶನ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಾಕಿರುವ ಈ ಪೋಸ್ಟ್, ನೂರಾರು ಶೇರ್ ಗಳಾಗಿದ್ದು, ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. " ಧನ್ಯವಾದಗಳು. ಸರಿಯಾದ ಉತ್ತರ. ಆದರೆ ಇದನ್ನು ಇಲ್ಲಿಗೆ ಬಿಟ್ಟುಬಿಡಿ, ನಿಮ್ಮ ಹೆಸರಿನಿಂದಲೇ ಬದುಕುತ್ತಿದ್ದಾರೆ. ಪಾಪ ಬದುಕಲಿ. ಅಂದು ರಾಜ್ಕುಮಾರ್ ಮತ್ತು ವಿಷ್ಣು ವರ್ಧನ್ ಒಂದು ಮಾಧ್ಯಮ ಹೇಳಿಕೆ ಕೊಟ್ಟಿದ್ದರೆ ಅಭಿಮಾನಿಗಳೆಲ್ಲರೂ ಕೇಳುತ್ತಿದ್ದರು. ನೀವಿಬ್ಬರೂ ಸೇರಿ ಒಂದು ಹೇಳಿಕೆ ಕೊಡಿ, ಚಂದನವನದಲ್ಲಿ ಎಲ್ಲರೂ ಚೆನ್ನಾಗಿರಿ, ಈ ಸ್ಟಾರ್ ವಾರ್ ಬೇಡ" ಎಂದು ಹಲವರು ಸಲಹೆ ನೀಡಿದ್ದಾರೆ
ಇನ್ನೂ ಕೆಲವರು ಸುದೀಪ್ ಪರವಾಗಿ ಮಾತನಾಡಿದ್ದು, ಅಭಿಮಾನಿಯೊಬ್ಬ" ಶೂಟಿಂಗ್ ಮುಗಿಸಿ 'ಪೈಲ್ವಾನ್' ಸಿನಿಮಾ ನೋಡಿ" ಎಂದಿದ್ದಾರೆ.
ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಿಡುಗಡೆಯ ಬಳಿಕ ಸಾಮಾಜಿಕ ಜಾಲತಾಣದ ಇಬ್ಬರೂ ಸ್ಟಾರ್ ನಟರ ಅಭಿಮಾನಿಗಳ ಅಭಿಮಾನದ ಸಮರ ನಡೆಯುತ್ತಿದೆ. ಪೈಲ್ವಾನ್ ಬಿಡುಗಡೆಯಾದ ನಂತರ ಆ ಚಿತ್ರದ ಬಗ್ಗೆ ಅಪಪ್ರಚಾರ ಮಾಡದಂತೆ ನಟ ಸುದೀಪ್ ಕೂಡ ಮನವಿ ಮಾಡಿದ್ದರು.