ಇಬ್ಭಾಗವಾದ ಜಮ್ಮು ಕಾಶ್ಮೀರ: ಲಡಾಕ್ಗೆ ಕೇಂದ್ರಾಡಳಿತ ಸ್ಥಾನಮಾನ

ನವದೆಹಲಿ, ಆಗಸ್ಟ್ 5      ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸುವ  ಸಂವಿಧಾನದ 370 (3) ನೇ ವಿಧಿಯನ್ನು ರದ್ದುಗೊಳಿಸುವ ಹಾಗೂ ಲಡಾಖ್ ಮತ್ತು ಜಮ್ಮು -ಕಾಶ್ಮೀರ ಎಂಬ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಕ್ಕೆ ಅವಕಾಶ ಮಾಡಿಕೊಡುವ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರತಿಪಕ್ಷಗಳ ಕೋಲಾಹಲದ ನಡುವೆ ಇಂದು ರಾಜ್ಯಸಭೆಯಲ್ಲಿ   ಮಂಡಿಸಿದ್ದಾರೆ. ಹೊಸ ಮಸೂದೆಯ ಪ್ರಕಾರ, ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಎಂಬ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆ ಬರಲಿದ್ದು, ಅದಕ್ಕೆ ಹೊಸ ಮಸೂದೆ ಅವಕಾಶ ಕಲ್ಪಿಸಲಿದೆ. ಸಚಿವ ಶಾ ಅವರು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ, 2019 ಅನ್ನು ಸದನದಲ್ಲಿ ಮಂಡಿಸಿದರು. ಇದರ ಪ್ರಕಾರ ಶಾಸಕಾಂಗವಿಲ್ಲದ ಲಡಾಖ್ಗೆ ಕೇಂದ್ರಾಡಳಿತದ ಸ್ಥಾನಮಾನ ಸಿಗಲಿದೆ ಎಂದು ಗೃಹ ಸಚಿವರು ಹೇಳಿದರು. ಈಗಾಗಲೇ ವಿಧಾನಸಭೆ ಅಸ್ತಿತ್ವದಲ್ಲಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ಇನ್ನು ಮುಂದೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಲಿದೆ ಎಂದು ಅವರು ಮಸೂದೆಯ ಉದ್ದೇಶ ವಿವರಿಸಿದರು.  ಲಡಾಖ್ ಜನರ ಬಹುದಿನಗಳ ಬೇಡಿಕೆ ಮತ್ತು ಆಶಯ ಸಾಕಾರಗೊಳಿಸಲು ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.  ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖ್ ವಿಭಾಗವು ದೊಡ್ಡ ವಿಸ್ತಾರ ಪ್ರದೇಶವನ್ನು ಹೊಂದಿದ್ದರೂ ಬಹಳ ವಿರಳ ಜನಸಂಖ್ಯೆ ಹೊಂದಿದೆ, ಲಡಾಖ್ ಜನರ ಬೇಡಿಕೆಯು ದೀರ್ಘ ಕಾಲದಿಂದ ಬಾಕಿ ಉಳಿದಿದ್ದು, ಇದೀಗ ಅವರ ಆಕಾಂಕ್ಷೆ ಈಡೇರಿಸಲು ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಲಾಗುತ್ತಿದೆ.  ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಅದರಿಂದ ಉಂಟಾಗುತ್ತಿರುವ ಆಂತರಿಕ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಲಾಗುತ್ತಿದ್ದು  ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವಾಗಲಿದ್ದರೂ ಪ್ರತ್ಯೇಕ ವಿಧಾನಸಭೆ ಇರಲಿದೆ.