ಡಿಸೆಂಬರ್ 14ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್
ಕೊಪ್ಪಳ 04 : ಡಿಸೆಂಬರ್ 14ರಂದು ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ “ರಾಷ್ಟ್ರೀಯ ಲೋಕ್ ಅದಾಲತ್” ಕಾರ್ಯಕ್ರಮದಲ್ಲಿ ರಾಜೀ ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್ ದರಗದ ಹೇಳಿದರು.
ಬುಧವಾರ ಕೊಪ್ಪಳ ಜಿಲ್ಲಾ ನ್ಯಾಯಾಲಯದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಡಿ.14ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ಜಿಲ್ಲೆಯ ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಕ್ಷಣ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ಯಾವುದೇ ಖರ್ಚು ಇಲ್ಲದೇ ಶೀಘ್ರ ತೀರ್ಮಾನಕ್ಕಾಗಿ ಲೋಕ್ ಅದಾಲತ್ ಒಂದು ವಿಶೇಷ ಅವಕಾಶವಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ದಾವೆದಾರರು ಹಾಗೂ ಕಕ್ಷಿದಾರರು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಇಬ್ಬರಿಗೂ ಒಪ್ಪಿಗೆಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿದು ವಿವಾದಗಳು ತೀರ್ಮಾನವಾಗುತ್ತದೆ. ರಾಜೀ ಸಂದಾನದಲ್ಲಿ ಯಾವುದೇ ವ್ಯಕ್ತಿಗಳಿಗೆ ಸೋಲು ಇರುವುದಿಲ್ಲ. ಇಬ್ಬರಿಗೂ ಗೆಲುವಿನಲ್ಲಿರಲು ಸಾಧ್ಯವಾಗುವುದರ ಜೊತೆಗೆ ಸಂಬಂಧಗಳನ್ನು ಒಳ್ಳೆಯ ರೀತಿಯಲ್ಲಿರಲು ಸಾಧ್ಯವಾಗುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಸಿವಿಲ್ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರು ಪಾವತಿಸಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಸರ್ವೋಚ್ಛ ಮತ್ತು ಉಚ್ಛ ನ್ಯಾಯಾಲಯದವರು ಇಂತಹ ಲೋಕ್ ಅದಾಲತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.ಈ ಹಿಂದೆ ಸೆಪ್ಟೆಂಬರ್ 14ರಂದು ಜಿಲ್ಲೆಯಲ್ಲಿ ನಡೆದ ಲೋಕ್ ಅದಾಲತ್ ಮೂಲಕ ನ್ಯಾಯಾಲಯದಲ್ಲಿ ಬಾಕಿ ಇರುವ 3328 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ರೂ. 55 ಕೋಟಿ 38 ಲಕ್ಷಕ್ಕೂ ಅಧಿಕ ಮೊತ್ತವು ವಸೂಲಾತಿಯಾಗಿ ಸರ್ಕಾರಕ್ಕೆ ಪಾವತಿ ಮಾಡಲಾಗಿದೆ. ಹೀಗೆ ರಾಜೀ ಸಂದಾನ ಮೂಲಕ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಮಾಡುವುದರಿಂದ ನ್ಯಾಯಾಲಯದಲ್ಲಿ ಉಂಟಾಗುವ ಒತ್ತಡ ಕಡಿಮೆಯಾಗುವುದರ ಜೊತೆಗೆ ವಿಶೇಷವಾಗಿ ನ್ಯಾಯಾಲಯಕ್ಕೆ ಬರುವ ಜನರಿಗೆ ಹಾಗೂ ಪಕ್ಷಗಾರರಿಗೆ ಒಳ್ಳೆಯ ನ್ಯಾಯ ಸಿಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ 35 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇದ್ದು, ಈ ಬಾರಿಯ ಲೋಕ್ ಅದಾಲತ್‌ನಲ್ಲಿ ಹೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಸುರೇಶ್ ಜಿ., ಪತ್ರಕರ್ತರು ಸೇರಿದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಉಪಸ್ಥಿತರಿದ್ದರು.