ತೆಲಂಗಾಣಕ್ಕೆ ಜಿಲ್ಲೆಯ ನೀರು; ರೈತ ಸಂಘದ ಜಿಲ್ಲಾಧ್ಯಕ್ಷ ಹಿರೇಗೌಡ ಆಕ್ರೋಶ
ದೇವರಹಿಪ್ಪರಗಿ, 27: “ಅವಳಿ ಜಿಲ್ಲೆಯ ರೈತರನ್ನು ಬಲಿಕೊಟ್ಟು ತೆಲಂಗಾಣಕ್ಕೆ ರಾಜ್ಯ ಸರಕಾರ ನೀರು ಹರಿಸುತ್ತಿದ್ದು, ಇದೊಂದು ರೈತ ವಿರೋಧಿ ಸರಕಾರವಾಗಿದೆ,” ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶಂಕರಗೌಡ ಹಿರೇಗೌಡ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ತೆಲಂಗಾಣ ರಾಜ್ಯಕ್ಕೆ ರಾತ್ರೋರಾತ್ರಿ 1.27 ಟಿಎಂಸಿ ನೀರು ಹರಿ ಬಿಡುವ ಮೂಲಕ ಜಿಲ್ಲೆಯ ರೈತರ ಬದುಕು ನಾಶ ಮಾಡಲು ಹೊರಟಿದೆ. ನಮಗೆ ಕುಡಿಯಲು ನೀರು ಇಲ್ಲದ ಸಂದರ್ಭದಲ್ಲಿ ತೆಲಂಗಾಣಕ್ಕೆ ನೀರು ಹರಿಸುವುದು ಸಮಂಜಸವಲ್ಲ." ಜಿಲ್ಲೆಯ ಸಚಿವರಾದ ಶಿವಾನಂದ ಪಾಟೀಲ ಹಾಗೂ ಎಂ.ಬಿ.ಪಾಟೀಲ ಅವರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ, ಒಬ್ಬರು ಸಮರ್ಥನೆ ಮಾಡಿಕೊಂಡರೆ, ಇನ್ನೊಬ್ಬರು ನೀರು ಬಿಟ್ಟಿದ್ದು ಗೊತ್ತೇ ಇಲ್ಲ ಎನ್ನುತ್ತಿದ್ದಾರೆ.
ಜಿಲ್ಲೆಯ ರೈತರಿಗೆ ಆಲಮಟ್ಟಿ ಜಲಾಶಯದಿಂದ ಸಂಪೂರ್ಣ ನೀರಾವರಿ ಮಾಡಲು ಪ್ರಯತ್ನಿಸದೆ ಅಧಿಕಾರದ ಆಸೆಗೆ ರೈತರನ್ನು ಬಲಿಕೊಡುತ್ತಿದ್ದಾರೆ ಹಾಗೂ ಮುಂಬರುವ ಬೇಸಿಗೆಯ ಸಮಯದಲ್ಲಿ ವಿದ್ಯುತ್ ಶಕ್ತಿ ಉತ್ಪಾದನೆ ಹಾಗೂ ನೀರಾವರಿಯ ಮೇಲೆ ಇದರಿಂದ ಪರಿಣಾಮ ರೈತರ ಮೇಲೆ ಬೀಳಲಿದೆ, ಬೇಸಿಗೆ ಸಮಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಹಾಗೂ ಬೆಲೆ ಏರಿಕೆ ಪರಿಣಾಮ ಜನಸಾಮಾನ್ಯರ ಹಾಗೂ ರೈತರ ಮೇಲೆ ಬೀರಲಿದೆ ಇದು ರೈತ ವಿರೋಧಿ ಸರ್ಕಾರ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ರೈತರು ಇದ್ದರು.