ಸಾಲ ವಸೂಲಾತಿ ತಕ್ಷಣ ನಿಲ್ಲಿಸಲು ಬ್ಯಾಂಕುಗಳಿಗೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ

ಬೆಳಗಾವಿ, 17 : ರೈತರ ಸಾಲ ವಸೂಲಾತಿ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಒಂದು ವೇಳೆ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದ್ದರೆ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಅವುಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು. 

ಸಂತ್ರಸ್ತರು ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಸೆ.17) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳು ಕೂಡ ಜನರ ಪರಿಸ್ಥಿತಿ ಅರಿತುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು. ಸಾಲಮನ್ನಾ ಅರ್ಹತೆ ಹೊಂದಿರುವ ರೈತರ ವಿರುದ್ಧದ ಪ್ರಕರಣಗಳನ್ನು ಸ್ಥಗಿತಗೊಳಿಸಲು ಕ್ರಮ ವಹಿಸಬೇಕು ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳ ಪ್ರಕ್ರಿಯೆ ಸರಳೀಕರಣಕ್ಕೆ ಸೂಚನೆ:

ಸಾಲ ವಿತರಣೆಗೆ ಸಂಬಂಧಿಸಿದ ದಾಖಲಾತಿಗಳನ್ನು(ಲೋನ್ ಡಾಕ್ಯುಮೆಂಟ್) ಕಡ್ಡಾಯವಾಗಿ ಕನ್ನಡದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು.

ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಪತ್ರವನ್ನು ಬರೆಯುವುದಾಗಿ ತಿಳಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡುವ ಪ್ರಕ್ರಿಯೆಯಲ್ಲಿ ವಿಳಂಬ ಆಗುತ್ತಿರುವುದರಿಂದ ಜನರು ಅನಿವಾರ್ಯವಾಗಿ ಖಾಸಗಿ ಬ್ಯಾಂಕುಗಳ ಮೊರೆ ಹೋಗುತ್ತಾರೆ.

ಆದ್ದರಿಂದ ರಾಷ್ಟ್ರೀಕೃತ ಬ್ಯಾಂಕುಗಳು ಪ್ರಕ್ರಿಯೆಗಳನ್ನು ಸರಳೀಕರಗೊಳಿಸಬೇಕು ಎಂದು ನಿದರ್ೇಶನ ನೀಡಿದರು.

ಸಾಲ ವಸೂಲಾತಿಗೆ ನಿಯೋಜಿಸುವ ಸಾಲ ವಸೂಲಾತಿ ಏಜೆನ್ಸಿಗಳ ಪೂವರ್ಾಪರ ಪರಿಶೀಲಿಸಿ ಅವರನ್ನು ನೇಮಕ ಮಾಡಿಕೊಳ್ಳಬೇಕು. ಸಾಲವಸೂಲಾತಿ ನೆಪದಲ್ಲಿ ಗೂಂಡಾವರ್ತನೆ ಅಥವಾ ದೌರ್ಜನ್ಯವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಆಗಸ್ಟ್ 14ರಂದು ರೈಲ್ವೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಬೆಳೆವಿಮೆ ಅವಧಿ ವಿಸ್ತರಣೆ ಹಾಗೂ ಸಾಲಮರು ಪಾವತಿ ಅವಧಿ ವಿಸ್ತರಣೆಗೆ ಬ್ಯಾಂಕ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿತ್ತು.

ರೈತರು ಸಂಕಷ್ಟದಲ್ಲಿದ್ದು, ಸಾಲ ವಸೂಲಾತಿಗೆ ಒತ್ತಡ ಹಾಕಬಾರದು ಎಂದು ತಿಳಿಸಲಾಗಿತ್ತು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾಲ ಹೊಂದಾಣಿಕೆ ಮಾಡಬಾರದು ಹಾಗೂ ಅವಧಿ ವಿಸ್ತರಣೆ ಮಾಡಿ ಕಾಲಾವಕಾಶ ನೀಡಬೇಕು ಎಂದು ಈಗಾಗಲೇ ರಾಜ್ಯಮಟ್ಟದ ಬ್ಯಾಂಕರ್ ಸಭೆಯಲ್ಲಿ ಕೂಡ ನಿದರ್ೇಶನ ನೀಡಲಾಗಿದೆ.

ಜಿಲ್ಲೆಯಲ್ಲಿ ಎಂದೂ ಕಂಡರಿಯದ ಪ್ರವಾಹದಿಂದ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ರೈತರು, ವ್ಯಾಪಾರಸ್ಥರು, ನೇಕಾರರು ಸಂಕಷ್ಟದಲ್ಲಿದ್ದು, ಅವರು ಬದುಕು ಕಟ್ಟಿಕೊಳ್ಳಲು ಸಕರ್ಾರ ಮತ್ತು ಬ್ಯಾಂಕರುಗಳು ನೆರವಾಗಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೆಲವು ಪರಿಹಾರ ಕೇಂದ್ರಗಳಿಗೆ ತೆರಳಿ ಕೆಲವು ಮೈಕ್ರೋ ಫೈನಾನ್ಸ್ ನವರು ಸಾಲ ವಸೂಲಾತಿಗೆ ಪ್ರಯತ್ನ ಮಾಡಿರುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇನ್ನು ಮುಂದೆ ಯಾರಾದರೂ ಸಾಲ ವಸೂಲಾತಿಗೆ ಮುಂದಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೋಟಿಸ್ ಕೂಡ ನೀಡಬಾರದು. ಮೊದಲು ಮಾನವೀಯತೆ ಆಧಾರದ ಮೇಲೆ ಕೆಲಸ. ನಂತರ ಕಾನೂನಾತ್ಮಕ ಕ್ರಮಗಳ ಬಗ್ಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಬಲ್ಲವರನ್ನು ಪ್ರತಿಯೊಂದು ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಬ್ಯಾಂಕ್ ಸಿಬ್ಬಂದಿ ಕೂಡ ನಿಯಮಾವಳಿ ಪ್ರಕಾರ ಕನ್ನಡವನ್ನು ಕಲಿತುಕೊಳ್ಳಬೇಕು ಎಂದರು.

ಖಾಸಗಿ ಬ್ಯಾಂಕ್-ಏಜೆಂಟರುಗಳ ಹಾವಳಿ:

ಮಸಗುಪ್ಪಿ ಮತ್ತಿತರ ಕಡೆ ಕೆಲ ಬ್ಯಾಂಕರುಗಳು ಪರಿಹಾರ ಕೇಂದ್ರಗಳಿಗೆ ತೆರಳಿ ಸಾಲ ವಸೂಲಾತಿಗೆ ಮುಂದಾಗಿರುವುದು ದುದರ್ೈವದ ಸಂಗತಿ ಎಂದು ರೈತ ಮುಖಂಡ ಪ್ರಕಾಶ್ ನಾಯಕ ಬೇಸರ ವ್ಯಕ್ತಪಡಿಸಿದರು.

ಕೆಲವು ಖಾಸಗಿ ಬ್ಯಾಂಕುಗಳು ಸಾಮ ವಸೂಲಾತಿಗೆ ನೇಮಿಸಿರುವ ಏಜೆಂಟರುಗಳು ಗೂಂಡಾಗಳ ರೀತಿ ವತರ್ಿಸಿ ಸಾಲ ಪಡೆದವರನ್ನು ಶೋಷಿಸಲಾಗುತ್ತಿದೆ ಎಂದು ಅವರು ದೂರಿದರು.

ಎಲ್ಲ ಬಗೆಯ ಸಾಲ ವಸೂಲಾತಿಯನ್ನು ತಕ್ಷಣವೇ ನಿಲ್ಲಿಸಬೇಕು.  ರೈತರ ಹಾಗೂ ಗ್ರಾಮೀಣ ಜನರ ಶೋಷಣೆ ಮಾಡದೇ ಮರುಪಾವತಿಗೆ ಸೂಕ್ತ ಕಾಲಾವಕಾಶ ನೀಡಬೇಕು ಎಂದು ರೈತ ಮುಖಂಡರಾದ ಜಯಶ್ರೀ ಗುರನ್ನವರ ಮನವಿ ಮಾಡಿಕೊಂಡರು.

ನೋಟಿಸ್ ಹಾವಳಿಯಿಂದ ರೈತರು ಕಂಗೆಟ್ಟಿದ್ದಾರೆ. ಕೃಷಿ ಯಂತ್ರೋಪಕರಣಗಳನ್ನು ಜಪ್ತಿ ಮಾಡುವಾಗ ನಿಯಮಾವಳಿ ಪಾಲನೆ ಮಾಡುತ್ತಿಲ್ಲ. ಆದಾಗ್ಯೂ ಮುನ್ಸೂಚನೆ ನೀಡದೇ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರ ಸಮಸ್ಯೆಗಳನ್ನು ಆಲಿಸಲು ವರ್ಷದಲ್ಲಿ ಕನಿಷ್ಠ ಮೂರು ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ಬ್ಯಾಂಕುಗಳಲ್ಲಿ ಕನ್ನಡ ಬಾರದ ಅಧಿಕಾರಿಗಳಿರುವುದರಿಂದ ರೈತರಿಗೆ ಅನೇಕ ರೀತಿಯ ತೊಂದರೆಗಳಾಗುತ್ತಿವೆ. ಆದ್ದರಿಂದ ಕನ್ನಡ ಬಲ್ಲ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

ಅದಲ್ಲದೇ ರೈತರು ಹಾಗೂ ಸಂತ್ರಸ್ತರ ಕಷ್ಟಗಳಿಗೆ ಮಾನವೀಯತೆ ಆಧಾರದ ಮೇಲೆ ಸ್ಪಂದಿಸಿದ ಜಿಲ್ಲಾಧಿಕಾರಿಗಳಿಗೆ ರೈತ ಮುಖಂಡರು ಕೃತಜ್ಞತೆ ಸಲ್ಲಿಸಿದರು.

ಬೆಳೆಸಾಲ ಅಲ್ಲ; ಬೆಳೆ ಸಹಾಯಧನ:

ಬ್ಯಾಂಕುಗಳು ಹಾಗೂ ಸಕರ್ಾರದಿಂದ ನೀಡಲಾಗುವ ಬೆಳೆಸಾಲವನ್ನು ಬೆಳೆಸಾಲ ಎಂದು ಕರೆಯದೇ ಬೆಳೆ ಸಹಾಯಧನ ಎಂದು ಪರಿಗಣಿಸಬೇಕು ಎಂದು ರೈತ ಮುಖಂಡರು ಸಲಹೆ ನೀಡಿದರು.

ಕೃಷಿ ಸಾಲ ಪದದ ಬದಲಾಗಿ ಕೃಷಿ ಸಹಾಯಧನ ಎಂದು ಬಳಸಬೇಕು ಎಂದರು.

ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕರಾದ ಅರುಣ್ "ಹಲವಾರು ಬಾರಿ ನಿದರ್ೇಶನ ನೀಡಿದಾಗ್ಯೂ ಕೆಲ ಖಾಸಗಿ ಬ್ಯಾಂಕುಗಳು ಸಾಲ ವಸೂಲಾತಿಗೆ ಮುಂದಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಮರುಪಾವತಿ ಸಾಮಥ್ರ್ಯ ಆಧರಿಸಿ ಸಾಲ ವಸೂಲಾತಿಗೆ ಮುಂದಾಗಬೇಕು" ಎಂದು ಹೇಳಿದರು.

ಖಾಲಿ ಚೆಕ್ ಇಟ್ಟುಕೊಂಡು ಖಾಸಗಿ ಬ್ಯಾಂಕುಗಳು ಹೆದರಿಸಿ ಸಾಲ ವಸೂಲಾತಿಗೆ ಮುಂದಾಗುತ್ತಿವೆ.

ಯಾವುದೇ ಕಾರಣಕ್ಕೂ ಸಾಲ ಮರುಪಾವತಿಗೆ ಒತ್ತಾಯಿಸಿ ನೋಟಿಸ್ ನೀಡುವಂತಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಅದೇ ಪ್ರಕಾರ ಉಳಿದ ನಿದರ್ೇಶನಗಳನ್ನು ಪಾಲಿಸಬೇಕು ಎಂದು ಬ್ಯಾಂಕುಗಳಿಗೆ ಸೂಚನೆ ನೀಡಿದರು.

ಪೊಲೀಸ್ ಆಯುಕ್ತರಾದ ಬಿಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಭೆಯಲ್ಲಿ ಉಪಸ್ಥಿತರಿದ್ದರು.

ಕೃಷಿ ಇಲಾಖೆಯ ಜಂಟಿ ನಿದರ್ೇಶಕ ಜಿಲಾನಿ ಮೊಖಾಶಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಮತ್ತಿತರ ಇಲಾಖೆಯ ಅಧಿಕಾರಿಗಳು, ರಾಷ್ಟ್ರೀಕೃತ, ಸಹಕಾರಿ ಮತ್ತು ಖಾಸಗಿ ಬ್ಯಾಂಕುಗಳ ಪ್ರತಿನಿಧಿಗಳು, ರೈತ ಮುಖಂಡರು, ರೈತ ಸಂಘದ ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.