ಬಳ್ಳಾರಿ,ಮೇ 12: ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಹಳ್ಳಿಗಳಲ್ಲಿರುವ ಮದ್ಯದ ಅಂಗಡಿಗಳಿಗೆ ತೀವ್ರ ಕಟ್ಟೆಚ್ಚರ ವಹಿಸಿದಾಗಿಯೂ ಆಂಧ್ರಪ್ರದೇಶದಿಂದ ಜನರು ನುಸುಳಿಕೊಂಡು ಬಂದು ಮದ್ಯ ತೆಗೆದುಕೊಂಡು ಹೋಗುವುದು ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಡಿಭಾಗದ ಮದ್ಯದ ಅಂಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಅರಣ್ಯ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ನಗರಾಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಆಂಧ್ರದಲ್ಲಿ ಕೊರೊನಾ ಪ್ರಕರಣಗಳು ತೀವ್ರ ಹೆಚ್ಚಳವಾಗುತ್ತಿದೆ.ಮತ್ತೊಂದೆಡೆ ಆ ಕಡೆಯಿಂದ ಜನರು ನುಸುಳದಂತೆ ತೀವ್ರ ಹದ್ದುಬಸ್ತು ಮಾಡಿದಾಗಿಯೂ ಜನರು ಬರುತ್ತಿರುವುದು ಚಿಂತೆಗೀಡು ಮಾಡುವಂತದ್ದು, ಈ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿರುವ ಮದ್ಯದ ಅಂಗಡಿಗಳನ್ನು ಲಾಕ್ಡೌನ್ ಮುಗಿಯುವವರೆಗೆ ಬಂದ್ ಮಾಡುವಂತೆ ಅವರು ಡಿಸಿ ನಕುಲ್ ಅವರಿಗೆ ಸೂಚಿಸಿದರು.
ಈಗಷ್ಟೇ ನಾನು ಬರುತ್ತಿರುವಾಗ ಕಮಲಾಪುರದ ವೈನ್ಶಾಪ್ವೊಂದರ ಮುಂದೆ 150ಕ್ಕೂ ಹೆಚ್ಚು ಜನರು ಮದ್ಯ ಪಡೆಯುವುದಕ್ಕಾಗಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ನೋಡಿದೆ; ಒಂದೇಡೆ ಜನರು ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದಾರೆ.
ಮತ್ತೊಂದೆಡೆ ಈ ರೀತಿಯ ತೊಂದರೆ ಬೇರೆ. ಆದ ಕಾರಣ ಗಡಿಭಾಗದಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಸಾಧ್ಯವಾದರೇ ಜಿಲ್ಲೆಯಲ್ಲಿರುವ ಎಲ್ಲ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಮುಂದೇನಾಗುತ್ತದೆಯೋ ನೋಡಿದರಾಯ್ತು ಎಂದು ಭಾವುಕರಾಗಿ ನುಡಿದ ಘಟನೆ ನಡೆಯಿತು.
ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಅವರು ಸಿರಗುಪ್ಪ ತಾಲೂಕಿನ ನಾಗರಾಳದಲ್ಲಿರುವ ಎಂಎಸ್ಐಎಲ್ ಅಂಗಡಿ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಮೋಕಾ,ಎತ್ತಿನಬೂದಿಹಾಳ, ಸಿಂಧುವಾಳ ಕಡೆಯ ಮದ್ಯದ ಅಂಗಡಿಗಳನ್ನು ಲಾಕ್ಡೌನ್ ಮುಗಿಯುವವರೆಗೆ ಬಂದ್ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಕೋರಿದ ಪ್ರಸಂಗ ನಡೆಯಿತು.
ಸಂಸದರಾದ ವೈ.ದೇವೇಂದ್ರಪ್ಪ,ಶಾಸಕರಾದ ಸೋಮಶೇಖರ ರೆಡ್ಡಿ,ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ,ಎಸ್ಪಿ ಸಿ.ಕೆ.ಬಾಬಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.