ತಾಳಿಕೋಟಿ, 22; ಇಂದು ಸಮಾಜದಲ್ಲಿ ಅಮಲು ಪದಾರ್ಥಗಳು ವ್ಯಾಪಕ ವಾಗುತ್ತಿರುವುದರಿಂದ ಕುಟುಂಬ ವ್ಯವಸ್ಥೆಯು ಹಾಳಾಗಿ ಯುವ ಶಕ್ತಿ ನಾಶವಾಗುತ್ತಿದೆ ಇದರ ನಿಯಂತ್ರಣ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ, ಇದಕ್ಕೆ ಸಂಘಟಿತ ಹೋರಾಟದ ಅಗತ್ಯ ಇದೆ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಖ್ಯಾತ ಪ್ರವಚನಕಾರ ಜನಾಬ. ಮೊಹಮ್ಮದ್ ಕುಂಞಿ ಹೇಳಿದರು.
ಶುಕ್ರವಾರ ಪಟ್ಟಣದ ಶ್ರೀ ಶರಣ ಮುತ್ಯಾ ದೇವಸ್ಥಾನ ಆವರಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನಗರ ಶಾಖೆಯು ಹಮ್ಮಿಕೊಂಡ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಅಮಲು ಮುಕ್ತ ಸಮಾಜ ಮತ್ತು ಯುವಜನತೆ ವಿಷಯದ ಕುರಿತು ಅವರು ಪ್ರವಚನ ನೀಡಿದರು. ಸಮಾಜದಿಂದ ಅಮಲು ಮುಕ್ತಗೂಳಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ ಇದಕ್ಕೆ ಮನ ಪರಿವರ್ತನೆ ಅಗತ್ಯವಿದೆ, ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಸಿಗುವಂತಾಗಬೇಕು, ನಾನು ಮಾಡುವ ಎಲ್ಲ ಅಪರಾಧ ಕೃತ್ಯಗಳನ್ನು ಆ ದೇವನು ನೋಡುತ್ತಿದ್ದಾನೆ ಎಂಬ ಪ್ರಜ್ಞೆ ಜಾಗೃತವಾಗಬೇಕು ಆಗ ಮಾತ್ರ ನಾವು ಒಬ್ಬ ಒಳ್ಳೆಯ ವ್ಯಕ್ತಿಯಾಗಲು ಸಾದ್ಯ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ.ಪ್ರಘುಗೌಡ ಲಿಂಗದಳ್ಳಿ ಅವರು ವ್ಯಕ್ತಿಯ ಆರೋಗ್ಯ ಮತ್ತು ಅವನ ಮಾನಸಿಕ ಸ್ಥಿತಿ ಉತ್ತಮವಾಗಿದ್ದರೆ ಮಾತ್ರ ಒಂದು ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ,ಇವತ್ತು ಯುವ ಸಮುದಾಯ ಕೆಡುಕಿನ ಕಡೆಗೆ ಅತಿ ವೇಗವಾಗಿ ಹೋಗುತ್ತಿದೆ ಅವರನ್ನು ರಕ್ಷಿಸುವ ಕೆಲಸವಾಗಬೇಕು ಯುವಶಕ್ತಿ ನಮ್ಮ ದೇಶದ ಸಂಪತ್ತು ನಾವೆಲ್ಲರೂ ಸೇರಿ ಜಾತಿ ಮತ ಭೇದ ಮರೆತು ಒಂದು ಭವ್ಯ ಭಾರತದ ನಿರ್ಮಾಣ ಮಾಡಬೇಕಾಗಿದೆ ಇದಕ್ಕೆ ಇಂತಹ ವೇದಿಕೆಗಳು ಪೂರಕ ವಾಗುತ್ತವೆ ಎಂದರು.
ಪ್ರವಚನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕೊಡೆಕಲ್ಲದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಮಾಜವನ್ನು ಎಲ್ಲ ರೀತಿಯ ಅಮಲಿನಿಂದ ರಕ್ಷಿಸಬೇಕಾಗಿದೆ, ಧರ್ಮಾಂಧತೆ ಕೂಡಾ ಒಂದು ಅಮಲಾಗಿದೆ ಇದು ಮೆದುಳಿನಲ್ಲಿ ಹೊಕ್ಕಿಕೊಂಡರೆ ಅದು ಸಮಾಜಕ್ಕೆ ಮಾರಕವಾಗುತ್ತದೆ, ತಾಳಿಕೋಟಿ ಪಟ್ಟಣದಲ್ಲಿ ಒಳ್ಳೆಯ ಭಾವೈಕ್ಯತೆಯ ವಾತಾವಣ ವಿದೆ ಇದು ಹಾಳಾಗದಂತೆ ನೋಡಿಕೊಳ್ಳಿ ಭಾವೈಕ್ಯತೆ ಸಂದೇಶ ಸಾರುವ ಇಂತಹ ಪ್ರವಚನದ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ನಡೆಯಬೇಕಾಗಿದೆ ಜಮಾತ್ ನ ಈ ಕಾರ್ಯ ಶ್ಲಾಘನೀಯ ಎಂದರು.
ಜಮಾತ್ ವಲಯ ಸಂಚಾಲಕ ಎಂ.ಐ.ಬಡಗಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಮುರುಗೇಶ ವಿರಕ್ತಮಠ, ಶ್ರೀ ಶರಣಪ್ಪ ಮುತ್ಯಾ ಶರಣರು, ಸಯ್ಯದ್ ಶಕೀಲ್ ಅಹಮದ್ ಖಾಜಿ, ಫಾದರ್ ರಾಬರ್ಟ್ ಕ್ರಿಸ್ಟಾ, ಡಾ.ವಿ.ಎಸ್.ಕಾರ್ಚಿ, ಡಾ.ಐ.ಬಿ.ತಳ್ಳೊಳ್ಳಿ, ದಶರಥಸಿಂಗ್ ಮನಗೂಳಿ, ಎಸ್.ಬಿ.ಕಟ್ಟಿಮನಿ, ಪ್ರಭುಗೌಡ ಮದರಕಲ್ಲ, ಹಿರಿಯ ಪತ್ರಕರ್ತ ಜಿ.ಟಿ.ಘೋರೆ್ಡ, ಕಸಾಪ ಅಧ್ಯಕ್ಷ ಆರ್.ಎಲ್. ಕೊಪ್ಪದ, ಎಂ.ಎಸ್.ಸರಶಟ್ಟಿ, ಅಶೋಕ್ ಹಂಚಲಿ, ಕಾಶಿನಾಥ್ ಸಜ್ಜನ, ಮಂಜುನಾಥ್ ಶೆಟ್ಟಿ, ಗಂಗಾಧರ ಕಸ್ತೂರಿ, ಸುಮಂಗಲಾ ಕೋಳೂರ, ಡಾ.ಸರೋಜಾ ತೊನಶ್ಯಾಳ, ಡಿ.ವಿ. ಪಾಟೀಲ, ಡಾ.ಎ.ಎ.ನಾಲಬಂದ, ಅಲ್ಲಾಭಕ್ಷ್ಮ ನಮಾಜ್ ಕಟ್ಟಿ, ಆರ್.ಐ.ಒಂಟಿ, ಸಿಕಂದರ ವಠಾರ, ರೋಶನ ಡೋಣಿ, ಎಂ.ಎ.ಮೇತ್ರಿ, ಎ.ಡಿ.ಎಕೀನ, ಮೌ.ಮಹಮ್ಮದ್ ಹುಸೇನ್ ಪಠಾಣ, ಅಂಜುಮ್ ಎಕೀನ, ಝುಫೀಶಾ ನಿಖತ್ ಖಾಜಿ ಇದ್ದರು.