ಸಭೆಗೆ ಗೈರು ಹಾಜರಾದ ಮುಖ್ಯಸ್ಥರ ಮೇಲೆ ಶಿಸ್ತುಬದ್ದ ಕ್ರಮ

ಲೋಕದರ್ಶನ ವರದಿ

ರಾಮದುರ್ಗ 29: ತಾಲ್ಲೂಕಿನ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾದ ಇಲಾಖಾ ಮುಖ್ಯಸ್ಥರ ಮೇಲೆ ಶಿಸ್ತಬದ್ದ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಶಾಸಕ ಮಹಾದೇವಪ್ಪ ಯಾದವಾಡ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಶನಿವಾರ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಗೆ ಸುಮಾರು 9 ಜನ ಇಲಾಖಾ ಮುಖ್ಯಸ್ಥರು ಗೈರು ಉಳಿದಿದ್ದಾರೆ. ಅಂತೆಯೇ ತಾಲ್ಲೂಕು ಪಂಚಾಯ್ತಿಗೆ ಇಲಾಖಾ ಕಾಮಗಾರಿಯ ಅಭಿವೃದ್ಧಿ ಮಾಹಿತಿ ನೀಡಿಲ್ಲ. ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ವರದಿ ನೀಡುವಂತೆ ಅವರು ಸೂಚಿಸಿದರು. ಸರ್ಕಾರಕ್ಕೆ ಆದಾಯ ತಂದುಕೊಡುವ ಅಬಕಾರಿ, ಕಂದಾಯ ಮತ್ತು ಸಾರಿಗೆ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಣೆ ಮಾಡಬೇಕು. 

ಸರ್ಕಾರದಿಂದ ಬಿಡುಗಡೆಗೊಳ್ಳುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಉಳಿದ ಇಲಾಖೆಗಳು ಮುಂದಾಗಬೇಕು. ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಗೆ ಮರ್ಯಾದೆ ನೀಡದ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು. ಸರ್ಕಾರ ನೀಡುವ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಯಾರೆಂದು ಅರಿತುಕೊಂಡಿಲ್ಲ. ತಮ್ಮ ಇಲಾಖೆಗೆ ಯಾವ ಯೋಜನೆ, ಅನುದಾನ ಬೇಕು ಎಂಬ ಬೇಡಿಕೆ ಇಟ್ಟಿಲ್ಲ. ಕೇವಲ ಇಲಾಖಾ ಕೆಲಸ ನಿರ್ವಹಣೆ ಮಾಡಿದರೆ ಸಾಲದು. ತಮ್ಮ ಭಾಗದ ಚುನಾಯಿತ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಕರ್ಾರದ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ತಾಕೀತು ಮಾಡಿದರು. ತಾಲ್ಲೂಕಿನಲ್ಲಿ ಒಟ್ಟು 9 ಅಂಗನವಾಡಿ ಶಿಕ್ಷಕಿಯರು, 8 ಜನ ಸಹಾಯಕಿಯರ ಸ್ಥಾನಗಳನ್ನು ಭರ್ತಿ ಮಾಡಲು ಸಿಡಿಪಿಓ ಸಿಂಗಾರೆವ್ವ ಒಂಟಮೂರಿ ವಿಫಲಗೊಂಡಿದ್ದಾರೆ. 19 ಕಡೆಗಳಲ್ಲಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲು ಮುಂದಾಗಿಲ್ಲ. ಕೆಲಸ ಮಾಡುವ ಜಿಲ್ಲಾ ಪಂಚಾಯ್ತಿ ಸದಸ್ಯರ ಸಹಕಾರ ಪಡೆದುಕೊಳ್ಳಲು ಅವರು ಹಿಂದೇಟು ಹಾಕುತ್ತಿರುವುದಕ್ಕೆ ಎಂದು ತರಾಟೆಗೆ ತೆಗೆದುಕೊಂಡರು. ಗ್ರಾಮೀಣ ಪ್ರದೇಶದ ಬೀಡಾ ಅಂಗಡಿಗಳಲ್ಲೂ ಸಾರಾಯಿ ಮಾರಾಟಕ್ಕೆ ನೂರಾರು ಬೈಕ್ಗಳಲ್ಲಿ ಮದ್ಯ ಸಾಗಿಸಲಾಗುತ್ತಿದೆ. 

ಅಬಕಾರಿ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತ್ತಿದ್ದಾರೆ. ತ್ರೈಮಾಸಿಕ ಕೆಡಿಪಿ ಸಭೆ ಆರಂಭಗೊಂಡು ಒಂದು ಗಂಟೆ ತಡವಾಗಿ ಅಧಿಕಾರಿ ಖಾಸಗಿ ವಸ್ತ್ರ ಧರಿಸಿ ಬರುವುದು ಅವರ ಕಾರ್ಯದಕ್ಷತೆಯನ್ನು ಎತ್ತಿ ತೋರುತ್ತದೆ. ಅಬಕಾರಿ ಅಧಿಕಾರಿಗಳು ಶಿಸ್ತುಬದ್ದವಾಗಿ ಇಲಾಖಾ ಸಮವಸ್ತ್ರದಲ್ಲಿ ಬರದೇ ಸಭಾ ಮರ್ಯಾದೆ ಕಳೆಯುತ್ತಿದ್ದಾರೆ. ನಿಂದೆಗಣ್ಣಲ್ಲೇ ಸಭೆಗೆ ಹಾಜರಾಗುತ್ತಾರೆ. ಹೀಗಾದರೆ ಅವರು ಎಷ್ಟು ಕೆಲಸ ಮಾಡುತ್ತಾರೆ ಎಂಬುದನ್ನು ಸ್ಮರಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ತಹಶೀಲ್ದಾರ ಗಿರೀಶ ಸ್ವಾದಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಮೇಶ ದೇಶಪಾಂಡೆ, ರೇಣಪ್ಪ ಸೋಮಗೊಂಡ, ಮಾರುತಿ ತುಪ್ಪದ, ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.