ಇನ್ಮುಂದೆ ರೈಲ್ವೆ ನಿಲ್ದಾಣದಿಂದ ನೇರ ಬಿಎಂಟಿಸಿ ಬಸ್

ಬೆಂಗಳೂರು,  ಡಿ.16ಲಗೇಜ್ ಎತ್ತಿಕೊಂಡು ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಬರುವ ತೊಂದರೆ ಇನ್ಮುಂದೆ ತಪ್ಪಲಿದೆ. ಇನ್ನು ಮುಂದೆ ರೈಲು ನಿಲ್ದಾಣದ ಅಂಚಿನವರೆಗೂ ಬಸ್‌ ಸಂಚರಿಸಲಿದೆ. ನಗರದ ಕ್ರಾಂತಿವೀರ ಸಂಗೊಳ್ಳಿ  ರಾಯಣ್ಣ ರೈಲು ನಿಲ್ದಾಣದಿಂದ(ಮೆಜೆಸ್ಟಿಕ್) ವಿವಿಧ ಭಾಗಗಳಿಗೆ ನೇರ ಬಿಎಂಟಿಸಿ ಬಸ್ ಸೇವೆ  ಪ್ರಾರಂಭವಾಗಲಿದ್ದು ಪ್ರಯಾಣಿಕರಿಗೆ ನಿಗಮ ಸೌಲಭ್ಯ ಕಲ್ಪಿಸಿದೆ.ರೈಲ್ವೇ  ನಿಲ್ದಾಣದ ಗೇಟ್ ಸಂಖ್ಯೆ 3 ರಿಂದ ವಿವಿಧ ಭಾಗಗಳಿಗೆ ಬಿಎಂಟಿಸಿ ಬಸ್ ಸೇವೆ  ಆರಂಭವಾಗಿದ್ದು, ನಿಗಮದ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ನೂತನ ಬಸ್ ಸೇವೆ  ಪರಿಶೀಲಿಸಿದರು.ಬಿಎಂಟಿಸಿ ಅಧ್ಯಕ್ಷ ಎನ್ .ಎಸ್ ನಂದೀಶ್ ರೆಡ್ಡಿ, ಬೆಂಗಳೂರು  ಸೆಂಟ್ರಲ್ ಸಂಸದ ಪಿ.ಸಿ. ಮೋಹನ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರು ಪರಿಶೀಲನೆ ನಡೆಸಿ   ಪ್ರಯಾಣಿಕರ ಕುಂದುಕೊರೆತಗಳನ್ನು ಆಲಿಸಿದರು.ರೈಲ್ವೇ ನಿಲ್ದಾಣದಿಂದ ಬೆಂಗಳೂರಿನ 54ಭಾಗಗಳಿಗೆ ನೇರ ಬಸ್ ಸೇವೆ ಒದಗಿಸಲಿರುವ ನೂತನ ಯೋಜನೆ ಇದಾಗಿದೆ.ನೂತನ  ಬಿಎಂಟಿಸಿ ಸೇವೆ ಪರಿಶೀಲನೆ ಬಳಿಕ ಬಿಎಂಟಿಸಿ ಅಧ್ಯಕ್ಷ ಎನ್ ಎಸ್ ನಂದೀಶ್ ರೆಡ್ಡಿ  ಮಾತನಾಡಿ, ಸರ್ಕಾರ ಬಂದಾಗಿನಿಂದ ಬಿಎಂಟಿಸಿ ಹಲವಾರು ಯೋಜನೆಗಳನ್ನು ಬಿಎಂಟಿಸಿ  ಮಾಡುತ್ತಿದೆ. ಸಂಸದ ಪಿ.ಸಿ ಮೋಹನ್ ಅವರು ತಮ್ಮದೇ ಶೈಲಿಯಲ್ಲಿ ಉಪ ನಗರ ರೈಲು ಯೋಜನೆ  ಯಶಸ್ಸಿಗೆ ಹೊರಟಿದ್ದಾರೆ. ಅವರ ಸೂಚನೆಯಂತೆ ಬಿಎಂಟಿಸಿಯನ್ನು ರೈಲ್ವೇ ನಿಲ್ದಾಣಕ್ಕೆ  ಸಂಪರ್ಕ ಮಾಡಲಾಗುತ್ತಿದ್ದು, ಮೊದಲನೇ ಕಂತಿನಲ್ಲಿ ರೈಲ್ವೇ ನಿಲ್ದಾಣದಿಂದ 54 ಭಾಗಗಳಿಗೆ  ಬಸ್ ಸೇವೆ ಕಲ್ಪಿಸಲಾಗಿದೆ ಎಂದರು.ಕೆ.ಆರ್ ಪುರಂ, ಹೊಸಕೋಟೆ, ಕಾಡುಗೋಡಿ,  ಅತ್ತಿಬೆಲೆ, ಸರ್ಜಾಪುರ ರಸ್ತೆ, ಯಲಹಂಕ ಸೇರಿದಂತೆ ಹಲವು ಭಾಗಗಳಿಗೆ ಸಂಚಾರ ಸೇವೆ  ಇದಾಗಿದ್ದು, ಎಲ್ಲ ಭಾಗಗಳಿಗೆ ದಿನಕ್ಕೆ 9 ಬಸ್ ಗಳ ಸೇವೆಗಳನ್ನು ಪ್ರಾರಂಭಿಸಲಾಗಿದೆ  ಎಂದರು.ಈ ಯೋಜನೆಯ ಅವಶ್ಯಕತೆ ಹೆಚ್ಚು ಇತ್ತು. ಯೋಜನೆಯಿಂದ ಜನರಿಗೆ ಹೆಚ್ಚು  ಅನುಕೂಲವಾಗಲಿದೆ. ಯೋಜನೆಯಿಂದ ಟ್ರಾಫಿಕ್ ಸಮಸ್ಯೆ ಕಡಿಮೆ ಆಗಲಿದ್ದು ಲಗೇಜ್ ಎತ್ತಿಕೊಂಡು  ರೈಲ್ವೇ ನಿಲ್ದಾಣದಿಂದ  ಬಸ್ ನಿಲ್ದಾಣಕ್ಕೆ ಪ್ರಯಾಣಿಕರಾಗುತ್ತಿದ್ದ ತೊಂದರೆಗೆ ಇದು  ಪರಿಹಾರ. ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ  ಮೋಹನ್ ಅವರ ಸಹಕಾರ  ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ನಗರದ ಹಲವು ರೈಲ್ವೇ ನಿಲ್ದಾಣಗಳಿಂದ ಬಿಎಂಟಿಸಿ ಸೇವೆ  ಒದಗಿಸಲು ಸರ್ವೇ ನಡೆಸಿ ಅವಶ್ಯಕತೆ ಇರುವೆಡೆ ಬಸ್ ಸೇವೆ ಒದಗಿಸಲಾಗುವುದು ಎಂದು ನಂದೀಶ್  ರೆಡ್ಡಿ ಸ್ಪಷ್ಟಪಡಿಸಿದರು