ಜಾಲವಾದ ಜಾತ್ರೆಯ ಪ್ರಚಾರ ಪತ್ರಿಕೆ ಬಿಡುಗಡೆ ಮಾಡಿದ ದಿಂಗಾಲೇಶ್ವರ ಶ್ರೀ

Dingaleshwar shri released the promotional magazine of the Jalwad fair

ದೇವರಹಿಪ್ಪರಗಿ 28: ತಾಲೂಕಿನ ಜಾಲವಾದ ಗ್ರಾಮದ ಶ್ರೀ ಮುರುಘೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಚಾರ ಪತ್ರಿಕೆ ಬಿಡುಗಡೆಗೊಳಿಸಿದ ಶಿರಹಟ್ಟಿ ಭಾವೈಕ್ಯ ಪೀಠದ ಜಗದ್ಗುರು ಪಕೀರ ದಿಂಗಾಲೇಶ್ವರ ಸ್ವಾಮೀಜಿ. 

ಪಟ್ಟಣದ ಗದ್ದಿಗಿಮಠದಲ್ಲಿ ಬುಧವಾರದಂದು ಪ್ರಚಾರ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಮಠದ ಹಿರಿಯ ಶ್ರೀಗಳ ನೇತೃತ್ವದಲ್ಲಿ ಜಾಲವಾದ ಗ್ರಾಮದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಿ.1-12-2024 ರಿಂದ 30-12-2024 ರವರೆಗೆ ಜನಜಾಗೃತಿ ಸಂಚಾರಿ ಪ್ರವಚನ ಪ್ರತಿ ಗ್ರಾಮದಲ್ಲಿ 5ದಿನ ನಡೆಯಲಿದೆ.ದಿ.1-1-2025 ರಂದು ಜಾಲವಾದ ಗ್ರಾಮದಲ್ಲಿ ಕಲಬುರಗಿ ಶರಣಬಸವೇಶ್ವರರ ಪುರಾಣ ಪ್ರವಚನ, ಪ್ರಸಾದ ವ್ಯವಸ್ಥೆ ಹಾಗೂ ಬಸವ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುತ್ತದೆ.ಜ.14 ಹಾಗೂ 15 ರಂದು ಬಸವ ಬ್ರೇನ್ ಆಸ್ಪತ್ರೆ ವತಿಯಿಂದ ನರ ಹಾಗೂ ಪಾರ್ಶ್ವ ತಪಾಸಣೆ,ವಿಜಯಪುರ ಅನುಗ್ರಹ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪ್ರಭುಗೌಡ ಲಿಂಗದಳ್ಳಿ ಅವರ ನೇತೃತ್ವದಲ್ಲಿ ಉಚಿತ ಕಣ್ಣು ತಪಾಸಣೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.ಜ.16 ರಂದು ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಶ್ರೀ ಮಡಿವಾಳೇಶ್ವರ ಜನ್ಮ ವರ್ಧಂತಿ ಮಹೋತ್ಸವದ ಪ್ರಯುಕ್ತ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ನಂತರ ಪಲ್ಲಕ್ಕಿ ಉತ್ಸವ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಕಲವಾದ್ಯ ವೈಭವಗಳೊಂದಿಗೆ ನಡೆಯಲಿದೆ .ಜ.17 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಂತರ ಜಾನುವಾರ ಜಾತ್ರೆ ಸುಮಾರು 5 ದಿನಗಳ ಕಾಲ ನಡೆಯಲಿದೆ ಜ.15ರಂದು ಶ್ರೀ ಮುರುಘೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಧರ್ಮಸಭೆ ಅದ್ದೂರಿಯಾಗಿ ನಡೆಯಲಿದೆ.  

ಸುಮಾರು ತಿಂಗಳ ಪರಿಯಂತರ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.ನಂತರ ಜಾಲವಾದ ಗ್ರಾಮದ ಶ್ರೀ ಮಠದಲ್ಲಿ ಕಿರಿಯ ಹಾಗೂ ಹಿರಿಯ ಸ್ವಾಮೀಜಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಪ್ರಚಾರ ಪತ್ರಿಕೆಯನ್ನು ಗ್ರಾಮದ ಪ್ರಮುಖರು ವಿವಿಧ ಸ್ವಾಮೀಜಿಗಳು ಮೂಲಕ ಬಿಡುಗಡೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಪಟ್ಟಣದ ಗದ್ದಿಗೆ ಮಠದ ಮ.ನಿ.ಪ್ರ. ಶ್ರೀ ಮಡಿವಾಳೇಶ್ವರ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಾಲವಾದ ಗ್ರಾಮದ ಶ್ರೀ ಮಠದ ಕಿರಿಯ ಸ್ವಾಮೀಜಿಗಳಾದ ಮ.ನಿ.ಪ್ರ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಸ್ವಾಮೀಜಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.