ಅ 10 ರಿಂದ 24 ರವರೆಗೆ ನವೀನ ಕಲಿಕಾ ಕಾರ್ಯಕ್ರಮ ಧ್ರುವ್

 ಬೆಂಗಳೂರು, ಅ 10:    ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ನಾವಿನ್ಯತಾ ಕಲಿಕಾ ಕಾರ್ಯಕ್ರಮ 'ಧ್ರುವ್' ಗೆ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಲ್ಲಿ ಗುರುವಾರ ಅ 10 ರಂದು ಚಾಲನೆ ಸಿಗಲಿದೆ. ಈ ಕಾರ್ಯಕ್ರಮ ದೆಹಲಿಯ ಐಐಟಿಯಲ್ಲಿ ಈ ತಿಂಗಳ 24 ರಂದು ಕೊನೆಗೊಳ್ಳಲಿದೆ. ವಿಜ್ಞಾನ, ಗಣಿತ ಮತ್ತು ಪ್ರದರ್ಶಕ ಕಲೆಗಳ ವಿಭಾಗದಿಂದ 60 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ದೇಶದ ಸಾಮಾಜಿಕ - ಆರ್ಥಿಕ, ರಾಜಕೀಯ ಮತ್ತು ಪರಿಸರ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸಾಮಥ್ರ್ಯವುಳ್ಳ ವಿದ್ಯಾರ್ಥಿಗಳ ಕಲ್ಪನಾ ಶಕ್ತಿ, ಕೌಶಲ್ಯ ಮತ್ತು ಜ್ಞಾನ ವೃದ್ಧಿ ಈ ಕಾರ್ಯಕ್ರಮದ ಉದ್ದೇಶವಾಗಿದೆ. ತರಬೇತಿ ನಂತರ ವಿದ್ಯಾರ್ಥಿಗಳು ಭಾರತವನ್ನು ಐದು ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ರಾಷ್ಟ್ರವನ್ನಾಗಿಸುವ ಗುರಿ ಸಾಕಾರಕ್ಕೆ ಕೊಡುಗೆ ನೀಡಬಹುದಾಗಿ ಮತ್ತು ಹವಾಮಾನ ಬದಲಾವಣೆಗೆ ಪರಿಹಾರ ನೀಡಬಲ್ಲರಾಗಿರುತ್ತಾರೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.