ನವದೆಹಲಿ, ಡಿ 23, ಮಾಜಿ ನಾಯಕ
ಕಪಿಲ್ ದೇವ್ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕ್ರಿಕೆಟ್ ಅನ್ನು ಬಹು ಎತ್ತರಕ್ಕೆ ಬೆಳೆಸಿದ
ಪ್ರಮುಖರಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂಚೂಣಿಯಲ್ಲಿದ್ದಾರೆ. ಟಿ-೨೦ ಹಾಗೂ ಏಕದಿನ ಐಸಿಸಿ ವಿಶ್ವಕಪ್
ಮತ್ತು ಚಾಂಪಿಯನ್ಸ್ ಟ್ರೋಫಿ ತಂದು ಕೊಟ್ಟ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಎಂ.ಎಸ್ ಧೋನಿ ಪಾತ್ರರಾಗಿದ್ದಾರೆ.ಭಾರತೀಯ
ರೈಲ್ವೇಸ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದ ಎಂಎಸ್‌ಡಿ ಸತತ ಪರಿಶ್ರಮದಿಂದ ಭಾರತ ತಂಡದಲ್ಲಿ
ಸ್ಥಾನ ಪಡೆದು ವಿಕೆಟ್ ಕೀಪಿಂಗ್ ಕೌಶಲ, ಬ್ಯಾಟಿಂಗ್ ಹಾಗೂ ನಾಯಕತ್ವದಿಂದ ವಿಶ್ವದ ಗಮನ ಸೆಳೆದಿದ್ದಾರೆ.
ಟೀಮ್ ಇಂಡಿಯಾ ಮಾಜಿ ನಾಯಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇದೀಗ 15 ವರ್ಷಗಳು ತುಂಬಿವೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.
ಕಳೆದ 2004ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಎಂ.ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ
ಮಾಡಿದ್ದರು. ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿ ತಮ್ಮದೇ ಆದ ಕೇಶ ವಿನ್ಯಾಸದೊಂದಿಗೆ
2004ರ ಡಿ.23ರಂದು ಬಾಂಗ್ಲಾದೇಶ ವಿರುದ್ಧ ಚಿತ್ತಗಾಂಗ್‌ನಲ್ಲಿ ಚೊಚ್ಚಲ ಏಕದಿನ ಪಂದ್ಯವಾಡಿದ್ದರು.ಅನಿರೀಕ್ಷಿತವಾಗಿ
ಎಂ.ಎಸ್ ಧೋನಿ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ರನೌಟ್ ಆಗಿದ್ದರು. ಈ ಪಂದ್ಯದಲ್ಲಿ ಭಾರತ 11 ರನ್ ಗಳಿಂದ ಜಯ ಸಾಧಿಸಿತ್ತು.
ಈ ಸರಣಿಯಲ್ಲಿ ಧೋನಿ ಒಟ್ಟು 19 ರನ್ ಮಾತ್ರ ಗಳಿಸಿದ್ದರು.ಕಳಪೆ ಲಯದಲ್ಲಿದ್ದ ಧೋನಿ ಅವರು 2005ರ ಏಪ್ರಿಲ್‌ನಲ್ಲಿ
ಪಾಕಿಸ್ತಾನ ವಿರುದ್ಧದ ಸರಣಿಗೆ ಮತ್ತೇ ಆಯ್ಕೆಯಾದರು. ಸೌರವ್ ಗಂಗೂಲಿಯಿಂದ ಬ್ಯಾಟಿಂಗ್ ಮೂರನೇ ಕ್ರಮಾಂಕಕ್ಕೆ
ಬಡ್ತಿ ಪಡೆದ ಮೊದಲನೇ ಪಂದ್ಯದಲ್ಲಿ (ವಿಶಾಖಪಟ್ಟಣಂ) ಪಾಕ್ ಬೌಲರ್‌ಗಳನ್ನು ದೂಳಿಪಟ ಮಾಡಿದ್ದರು.
123 ಎಸೆತಗಳಲ್ಲಿ 143 ರನ್ ಚಚ್ಚಿದ್ದರು.ಮುಂದಿನ ವರ್ಷಗಳಲ್ಲಿ ಧೋನಿ ಅವರು ಸೀಮಿತ ಓವರ್‌ಗಳಲ್ಲಿ
ಅದ್ಭುತ ಆಟಗಾರನಾಗಿ ಹೊರಹೊಮ್ಮಿದ್ದರು. ನಂತರ, 2007ರಲ್ಲಿ ಟಿ-20 ವಿಶ್ವಕಪ್ ಉದ್ಘಾಟನಾ ಟೂರ್ನಿಗೆ
ಮೊದಲ ಬಾರಿ ಟೀಮ್ ಇಂಡಿಯಾ ನಾಯಕತ್ವ ವಹಿಸಿಕೊಂಡರು. ಐಸಿಸಿ ಟಿ-20(2007), ಏಕದಿನ ವಿಶ್ವಕಪ್(2011)
ಹಾಗೂ ಚಾಂಪಿಯನ್ಸ್ ಟ್ರೋಫಿ(2013) ಮೂರು ಪ್ರಶಸ್ತಿ ಗೆದ್ದ ಭಾರತ ತಂಡದ ಏಕೈಕ ನಾಯಕ ಎಂಬ ಹಿರಿಮೆಗೆ
ಧೋನಿ ಪಾತ್ರರಾಗಿದ್ದಾರೆ.ಏಕದಿನ ತಂಡದ ನಾಯಕನಾಗಿ ರಾಂಚಿ ಆಟಗಾರ ಒಂದು ದಶಕವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ್ದ
ನಂತರ ಟೀಮ್ ಇಂಡಿಯಾದಿಂದ ಧೋನಿ ಹೊರಗುಳಿದಿದ್ದಾರೆ. ನಂತರ, ಎರಡು ವಾರಗಳ ಕಾಲ ಭಾರತೀಯ ಸೇನೆಯಲ್ಲಿ
ಸಲ್ಲಿಸಲು ತೆರಳಿದಿದ್ದರು.ಕೆರಿಬಿಯನ್ ಪ್ರವಾಸ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್
ವಿರುದ್ಧದ ತವರು ಸರಣಿಗಳಲ್ಲಿ ಧೋನಿ ಆಡಿರಲಿಲ್ಲ. ಎಂ.ಎಸ್ ಧೋನಿ ಸ್ಥಾನದಲ್ಲಿ ರಿಷಭ್ ಪಂತ್ ವಿಕೆಟ್
ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ
ಟಿ-20 ವಿಶ್ವಕಪ್ ಗೆ ಧೋನಿ ಮರಳಲಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.