ಅಭ್ಯಾಸ ಪಂದ್ಯದಲ್ಲಿ ಧವನ್ ಕಳಪೆ ಪ್ರದರ್ಶನ, ಮಿಂಚಿದ ಕನ್ನಡಿಗ ರಾಹುಲ್ಗೆ ಸಿಗುತ್ತಾ ಚಾನ್ಸ್?


ಲಂಡನ್ 28: ಆಗಸ್ಟ್ 1ರಿಂದ ಇಂಗ್ಲೆಂಡ್ ವಿರುದ್ಧ ಪ್ರವಾಸಿ ಭಾರತ ತಂಡ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಆರಂಭಗೊಳ್ಳಲಿದ್ದು, ಅದಕ್ಕಾಗಿ ಉಭಯ ತಂಡಗಳು ಭಾರಿ ಪ್ಲಾನ್ ಹಾಕಿಕೊಂಡಿವೆ. 

ಇನ್ನು ಈಗಾಗಲೇ ಅಭ್ಯಾಸ ಪಂದ್ಯ ಆಡಿ ಟೀಂ ಇಂಡಿಯಾ ತಮ್ಮ ಸಾಮಥ್ರ್ಯ ಪರೀಕ್ಷೆ ಮಾಡಿಕೊಂಡಿದ್ದು, ಪಂದ್ಯದಲ್ಲಿ ಎಡಗೈ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ. ಅಭ್ಯಾಸ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅತೀವ ನಿರಾಸೆ ಮೂಡಿಸಿರುವ ಅವರ ಸ್ಥಾನಕ್ಕೆ ಮತ್ತೋರ್ವ ಓಪನರ್ ಆಯ್ಕೆಗೊಳ್ಳುವ ಸಾಧ್ಯತೆ ಇದೆ. 

ಇದರ ಜತೆಗೆ ಏಕದಿನ ಹಾಗೂ ಟಿ20 ಪಂದ್ಯಗಳಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿರುವ ಧವನ್ ಟೆಸ್ಟ್ ಸರಣಿಯಲ್ಲಿ ಆಡುವ 11ರಿಂದ ಹೊರಗುಳಿದರೆ ಆಶ್ಚರ್ಯ ಪಡಬೇಕಾಗಿಲ್ಲ.  

ಒಂದು ವೇಳೆ ಆರಂಭಿಕ ಬ್ಯಾಟ್ಸ್ಮನ್ಗಳಲ್ಲಿ ಎಡಗೈ ಮತ್ತು ಬಲಗೈ ಸಂಯೋಜನೆ ಬೇಕೆಂದು ನಿರ್ಧರಿಸಿದಲ್ಲಿ ಮಾತ್ರ ಮುರಳಿ ವಿಜಯ್ ಜತೆಗೆ ಧವನ್ ಮೊದಲ ಟೆಸ್ಟ್ನಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ಇಲ್ಲವಾದಲ್ಲಿ ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಮತ್ತು 2ನೇ ಇನಿಂಗ್ಸ್ನಲ್ಲಿ ಔಟಾಗದೆ 36 ರನ್ಗಳನ್ನು ಗಳಿಸಿರುವ ಕೆ.ಎಲ್ ರಾಹುಲ್ಗೆ ಭಾರತದ ಪರ ಇನಿಂಗ್ಸ್ ಆರಂಭಿಸುವ ಅವಕಾಶ ಲಭ್ಯವಾಗಲಿದೆ.