ಮುಂಬೈ 04: ವಾರಗಳ ನಂತರ ಮಹಾರಾಷ್ಟ್ರ ಸರ್ಕಾರ ರಚನೆಗೆ ತಾರ್ಕಿಕ ಅಂತ್ಯ ಕಾಣುತ್ತಿದೆ. ಇಂದು ಬುಧವಾರ ಮುಂಬೈಯಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವೀಸ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಮುಖ್ಯಮಂತ್ರಿಯಾಗಿ ಅವರ ಹಾದಿ ಸುಗಮವಾಗಿದೆ.
ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಇಲ್ಲಿ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಫಡ್ನವೀಸ್ ಅವರ ಹೆಸರನ್ನು ಶಾಸಕ ಪಕ್ಷದ ನಾಯಕ ಸ್ಥಾನಕ್ಕೆ ಸೂಚಿಸಲಾಯಿತು. ಮುಂಬೈನ ವಿಧಾನ ಭವನದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಉಪಸ್ಥಿತರಿದ್ದರು. ಈ ಸಭೆಗೆ ನಿರ್ಮಲಾ ಸೀತಾರಾಮನ್ ಮತ್ತು ರೂಪಾನಿ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ಬಿಜೆಪಿ ನೇಮಿಸಿತ್ತು.
ಶಿಂಧೆ ಮತ್ತು ಫಡ್ನವಿಸ್ ನಡುವೆ ನಿನ್ನೆ ನಡೆದ ಒಂದು ಗಂಟೆ ಅವಧಿಯ ಸಭೆಯ ವಿವರಗಳು ಅಸ್ಪಷ್ಟವಾಗಿದ್ದರೂ, ಕೆಲವು ರಾಜಕೀಯ ವೀಕ್ಷಕರು ಇದನ್ನು ಬಿಜೆಪಿಯು ಶಿವಸೇನೆ ನಾಯಕರನ್ನು ಸಮಾಧಾನಪಡಿಸುವ ಪ್ರಯತ್ನವೆಂದು ಹೇಳಿದ್ದಾರೆ. ಆದರೆ ಇದು ನಾಳೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭ ಕುರಿತು ಎಂದು ಹೇಳಲಾಗುತ್ತಿದೆ.