ಸ್ಪರ್ಧಾತ್ಮಕ ಉದ್ಯಮವಾಗಿ ಬಿಎಸ್ಎನ್ಎಲ್ ಅಭಿವೃದ್ಧಿ: ರವಿಶಂಕರ್ ಪ್ರಸಾದ್

ನವದೆಹಲಿ, ಮಾರ್ಚ್ 19, ಭಾರತ್ ಸಂಚಾರ ನಿಗಮ ಮತ್ತು ಮಹಾನಗರ ದೂರವಾಣಿ ನಿಗಮಗಳನ್ನು  ಸ್ಪರ್ಧಾತ್ಮಕವಾಗಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ದೂರಸಂಪರ್ಕ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಹೇಳಿದ್ದಾರೆ.
ಅಲ್ಲದೆ, ಈ ಸಂಸ್ಥೆಗಳಲ್ಲಿ ಸ್ವಯಂ ನಿವೃತ್ತಿ ಪಡೆದ ಅನುಭವಿ ಉದ್ಯೋಗಿಗಳನ್ನು ಮತ್ತೆ ಉದ್ಯೋಗಕ್ಕಾಗಿ ಪರಿಗಣಿಸಲಾಗುವುದು ಎಂದು ಅವರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರವಿಶಂಕರ್ ಪ್ರಸಾದ್ ಅವರು, ದೂರಸಂಪರ್ಕ ವಲಯದಲ್ಲಿ ಸಾರ್ವಜನಿಕ ವಲಯ ಕಂಪೆನಿ ಕಾರ್ಯನಿರ್ವಹಿಸಬೇಕಾಗಿದೆ. ಪ್ರವಾಹ, ಚಂಡಮಾರುತ ಮತ್ತು ಇತರ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಬಿಎಸ್ಎನ್ಎಲ್
ಶ್ಲಾಘನೀಯ ಕಾರ್ಯ ನಿರ್ವಹಿಸಿದೆ ಎಂದು ಹೇಳಿದರು.
ಬಿಎಸ್‌ಎನ್‌ಎಲ್‌ನಲ್ಲಿ 78,569 ಉದ್ಯೋಗಿಗಳು ಮತ್ತು ಎಂಟಿಎನ್‌ಎಲ್‌ನಲ್ಲಿ 14,387 ಉದ್ಯೋಗಿಗಳು ಸ್ವಯಂ ನಿವೃತ್ತಿ ಕೋರಿದ್ದಾರೆ ಎಂದು ಇದಕ್ಕೂ ಮುನ್ನ ದೂರಸಂಪರ್ಕ ಖಾತೆ ರಾಜ್ಯ ಸಚಿವ ಸಂಜಯ್ ಧೋತ್ರೆ ತಿಳಿಸಿದ್ದಾರೆ. ಈ ನೌಕರರ ಬಾಕಿ ಮೊತ್ತದ ಬಹುಪಾಲು ಮೊತ್ತವನ್ನು ಮಾರ್ಚ್ 31 ರ ಮೊದಲು ಪಾವತಿಸಲಾಗುವುದು. ಉಳಿದ ಮೊತ್ತವನ್ನು ಮುಂದಿನ ವರ್ಷದೊಳಗೆ ನೀಡಲಾಗುವುದು. ಬಿಎಸ್‌ಎನ್‌ಎಲ್‌ನಲ್ಲಿ ಸದ್ಯ ವೇತನಗಳ ವೆಚ್ಚದ ಮೊತ್ತವನ್ನು ಅರ್ಧಕ್ಕೆ ಇಳಿಸಲಾಗಿದೆ. ನೌಕರರಿಗೆ ಜನವರಿಯವರೆಗೆ ವೇತನ ನೀಡಲಾಗಿದ್ದು, ವೈದ್ಯಕೀಯ ಮತ್ತು ರಜೆ ಪ್ರಯಾಣ ಭತ್ಯೆ (ಎಲ್‌ಟಿಎ) ಇತ್ಯರ್ಥಗೊಳಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಲು 527 ಕೋಟಿ ರೂ. ವೆಚ್ಚ ಮಾಡಿದೆ ಎಂದು ಧೋತ್ರೆ ತಿಳಿಸಿದ್ದಾರೆ.
ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಸ್ವಯಂ ನಿವೃತ್ತಿ ತೆಗೆದುಕೊಳ್ಳುವುದರಿಂದ, ಎರಡೂ ಸಂಸ್ಥೆಗಳು ಮಾನವ ಸಂಪನ್ಮೂಲ ಕೊರತೆಯಿಂದಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ ನಂತರ  ಹೊರಗುತ್ತಿಗೆ ಸಿಬ್ಬಂದಿ ನೇಮಕದೊಂದಿಗೆ ಪರಿಸ್ಥಿತಿ ನಿಭಾಯಿಸಲಾಗಿದೆ ಎಂದು ಧೋತ್ರೆ ಹೇಳಿದರು.
ಪುನಶ್ಚೇತನ ಪ್ಯಾಕೇಜ್  ಏಪ್ರಿಲ್ 1 ರಿಂದ 4-ಜಿ ಸೇವೆಯನ್ನು ಪರಿಚಯಿಸಲಾಗುವುದು. ಬಿಎಸ್ಎನ್ಎಲ್ ಸದ್ಯ 7,800 ಬಿಟಿಎಸ್ ಸೇವೆಯನ್ನು ಒದಗಿಸುತ್ತಿದೆ. ಕಳಪೆ ಸೇವೆಗಳನ್ನು ಒದಗಿಸಿದ್ದಕ್ಕಾಗಿ ಕೆಲ ಖಾಸಗಿ ದೂರವಾಣಿ ಸೇವಾ ಕಂಪೆನಿಗಳಿಗೆ ದಂಡ ವಿಧಿಸಲಾಗಿದೆ. ಕಾಲ್ ಡ್ರಾಪ್ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಹೆಚ್ಚು ಹೆಚ್ಚು ಮೊಬೈಲ್‍ ಗೋಪುರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.