ಪರೀಕ್ಷೆ ಎದುರಿಸುವ ಸಾಮರ್ಥ್ಯ ಬೆಳೆಸಿ: ಪ್ರೊ. ಖೊದ್ನಾಪೂರ

Develop ability to face exams: Prof. Khodnapura

ವಿಜಯಪುರ 14: ಇಂದಿನ ಸ್ಪರ್ಧಾತ್ಮಕ ಪೈಪೋಟಿ ಯುಗದಲ್ಲಿ ವಿದ್ಯಾರ್ಥಿಗಳು ವಿಷಯ ಜ್ಞಾನ ಪಡೆಯುವುದರ ಜತೆಗೆ ವಿಷಯವನ್ನು ಪುನರ್ಮನನ ಹಾಗೂ ಪರೀಕ್ಷೆಗೆ ಸಿದ್ದಗೊಳಿಸಲು ಪ್ರಾಯೋಗಿಕ ಮತ್ತು ಸಮಸ್ಯಾಧಾರಿತ ವಿಷಯಗಳಲ್ಲಿ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಬೇಕು, ಪರೀಕ್ಷೆ ಎದುರಿಸುವ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಪ್ರತಿ ವಿಷಯದಲ್ಲಿ ಪ್ರಶ್ನೆಪತ್ರಿಕೆ ಕಾರ್ಯಾಗಾರಗಳನ್ನು ಆಯೋಜಿಸುವುದು ಇಂದಿನ ಅಗತ್ಯತೆಯಾಗಿದೆ. ಇಂತಹ ಕಾರ್ಯಾಗಾರಗಳಿಂದ ವಿಷಯ ಪರಿಣತರಿಂದ ವಿದ್ಯಾರ್ಥಿಗಳಲ್ಲಿ ಪಠ್ಯಕ್ರಮಕ್ಕನುಗುಣವಾಗಿ ಅಧ್ಯಯನಶೀಲರನ್ನಾಗಿಸಲು ಮತ್ತು ಪರೀಕ್ಷೆಯಲ್ಲಿ ಪ್ರಶ್ನೆಗಳು ಹೇಗೆ ಬರಬಹುದು, ಸಮಸ್ಯೆಗಳನ್ನು ಹೇಗೆ ಬಿಡಿಸಬೇಕು ಮತ್ತು ಪರೀಕ್ಷಾ ಫಲಿತಾಂಶದಲ್ಲಿ ಅಗತ್ಯ ಸುಧಾರಣೆಯನ್ನು ತರಲು ಅನುಕೂಲವಾಗುತ್ತದೆ ಎಂದು ಮುಖ್ಯ ಅತಿಥಿ ವಿಜಯಪುರದ ಸರ್ಕಾರಿ ಪ್ರಥಮ ದಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಎಸ್‌.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.  

ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಿಂದ ಬಿ.ಕಾಂ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.  

ಅವರು ಮಾತನಾಡುತ್ತಾ, ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಫಲಿತಾಂಶದಲ್ಲಿ ಗಣನೀಯ ಸುಧಾರಣೆಯನ್ನು ತರಲು ಈ ತರಹದ ಪ್ರಶ್ನೆಪತ್ರಿಕೆ ಕಾರ್ಯಾಗಾರಗಳನ್ನು ಆಯೋಜಿಸುತ್ತಿರುವದು ಪ್ರಶಂಸನೀಯ ಸಂಗತಿ. ಇಂದು ಸರಕಾರಿ ಕಾಲೇಜುಗಳಲಿಯೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಧ್ಯಾಪಕರು ವಿಶೇಷವಾಗಿ ಪ್ರಶ್ನೆಪತ್ರಿಕೆ ಕಾರ್ಯಾಗಾರವನ್ನು ಕೈಗೊಂಡು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.  

ವಿದ್ಯಾರ್ಥಿಗಳು ಪದವಿಯ ಜೊತೆಗೆ ಸ್ಪಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ವಿದ್ಯಮಾನ, ವಿಜ್ಞಾನ-ತಂತ್ರಜ್ಞಾನ, ಕನ್ನಡ ಭಾಷಾ ಜ್ಞಾನ, ಇಂಗ್ಲೀಷ್ ಭಾಷಾ ಜ್ಞಾನ ಮತ್ತು ಮಾನಸಿಕ ಮತ್ತು ತಾರ್ಕಿಕ ಸಾಮರ್ಥ್ಯದಂತಹ ವಿಷಯಗಳನ್ನು ಓದಬೇಕು. ಪರೀಕ್ಷೆಗಳ ಪಠ್ಯಕ್ರಮಕ್ಕನುಗುಣವಾಗಿ ಅಧ್ಯಯನ ಸಾಮಗ್ರಿಯನ್ನು ಪಡೆದುಕೊಂಡು ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು ಮತ್ತು ಓದಿದ ವಿಷಯಗಳ ಬಗೆಗೆ ಗುಂಪು ಚರ್ಚೆಗಳನ್ನು ಕೈಕೊಳ್ಳಬೇಕು ಅಂದಾಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಗಳಿಸಬಹುದು ಎಂದು ಕಿವಿಮಾತು ಹೇಳಿದರು. ಇಂದಿನ ವಿದ್ಯಾರ್ತಿಗಳು ನಾಳಿನ ಭವ್ಯ ಭಾರತದ ಕುಡಿಗಳಾಗಿರುವುದರಿಂದ ಪ್ರತಿಯೊಬ್ಬ ಪ್ರಾಧ್ಯಾಪಕರು ವಿದ್ಯಾರ್ಥಿಗಳಲ್ಲಿರುವ ವಿಶಿಷ್ಟ ಅಭಿರುಚಿ, ಆಸಕ್ತಿ, ಮನೋಭಿಲಾಷೆಯನ್ನು ಗುರುತಿಸಿ ಅವರಿಗೆ ಜ್ಞಾನಾರ್ಜನೆ ಮಾಡುವ ಜತೆಗೆ ಪ್ರಾಯೋಗಿಕ ಜ್ಞಾನ, ಜೇವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಆತ್ಮಬಲ ಬೆಳೆಸುವದು ಇಂದಿನ ಅಗತ್ಯತೆಯಾಗಿದೆ ಎಂದರು. 

ಈ ಕಾರ್ಯಾಗಾರದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಬಿ.ಕಾಂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಭಾಗದ ಎಲ್ಲ ಪ್ರಾಧ್ಯಾಪಕರು ಸಹ ಉಪಸ್ಥಿತರಿದ್ದರು.