ಬೆಳಗಾವಿ, 5: ವಿಶ್ವಗುರು ಬಸವಣ್ಣನವರನ್ನು ಸಾಕಿ, ಸಲುಹಿ ರೂಪಿಸಿದ ಮಹಾನ್ ಚೇತನ - ಅವರ ಅಕ್ಕನವರಾದ ಕ್ರಾಂತಿಗಂಗೋತ್ರಿ ಅಕ್ಕ ನಾಗಲಾಂಬಿಕಾ ತಾಯಿಯವರು. ಗುರು ಬಸವಣ್ಣನವರಲ್ಲಿ ಸಮತಾ ತತ್ವವನ್ನು ಬೆಳೆಸಲು ಮೂಲ ಪ್ರೇರಕರೇ ಅಕ್ಕ ನಾಗಾಯಿ. ಬಹುಶಃ ಅವರ ಪ್ರೇರಣೆಯಿಂದಲೇ ಹೊಸ ಧರ್ಮ ರೂಪುಗೊಂಡಿತು ಎಂದರೆ ಉತ್ಪ್ರೇಕ್ಷೆ ಅಲ್ಲ. ಜಾತಿವಾದಿಗಳನ್ನು ಎದುರಿಸಿ, ಖಡ್ಗ ಹಿಡಿದು ಹೋರಾಡಿ, ಅಮೂಲ್ಯವಾದ ವಚನ ಸಾಹಿತ್ಯವನ್ನು ಸಂರಕ್ಷಿಸಿದ ಅವರ - ಇಳೆ ವಯಸ್ಸಿನ ಸಾಹಸ, ದೃಢತೆ ಇತಿಹಾಸದಲ್ಲಿ ಕಾಣ ಸಿಗದು. ಈ ಧರ್ಮ ಸ್ಥಾಪನೆಯಲ್ಲಿ ಅವರ ಪಾತ್ರ ಅನನ್ಯ. ಶ್ರೀಬಸವಣ್ಣನವರನ್ನು ಒಬ್ಬ ವಿಚಾರವಾದಿ, ಧೀಮನ್ಮತಿ, , ಕ್ರಾಂತಿ ಪುರುಷರನ್ನಾಗಿ ಮಾಡಿ, ವಿಶ್ವಗುರುವನ್ನಾಗಿ ರೂಪಿಸಿದ ಅವರ ದಿಟ್ಟತನ, ಕಾಳಜಿ ಒಂದು ಕಡೆಯಾದರೆ, ಅವರ ಏಕೈಕ ಸುಪುತ್ರರಾದ ಶ್ರೀ ಚನ್ನಬಸವಣ್ಣನವರನ್ನು ಚಿನ್ಮಯ ಜ್ಞಾನಿಯಾಗಿ ಬೆಳಸಿ 'ಷಟಸ್ಥಲ ಚಕ್ರವತರ್ಿ ಯನ್ನಾಗಿಸಲು ಅವರೇ ಕಾರಣರು. ವಚನ ಸಾಹಿತ್ಯವನ್ನು ಉಳವಿಯಲ್ಲಿ ಕಾಯ್ದಿಟ್ಟು, ತಮ್ಮ ಪ್ರೀತಿಯ ತಮ್ಮ ಶ್ರೀ ಬಸವಣ್ಣನವರು ಮತ್ತು ಮಹಾಜ್ಞಾನಿ ಮಗ ಶ್ರೀ ಚನ್ನಬಸವಣ್ಣನವರು ಲಿಂಗೈಕ್ಯರಾಗಿದ್ದರೂ ಎದೆಗುಂದೆ ಧರ್ಮ ಪ್ರಚಾರ ಮಾಡುತ್ತಾ , ನಂತರ ಚಿಕ್ಕಮಗಳೂರು ಜಿಲ್ಲೆಯ ತರಿಕೇರಿಯಲ್ಲಿ ಲಿಂಗೈಕ್ಯರಾದರು. ಅಂಜದೆ ಅಳುಕದೆ ಬಾಳಿ ಬೆಳಗಿ, ಇಂದು ನಾವು ಕಾಣುವ ಹುಲಸಾದ ಲಿಂಗಾಯತ ಧರ್ಮ ಹಬ್ಬಲು ಅವರು ಪಟ್ಟ ಪರಿಶ್ರಮ, ಹೋರಾಟ, ತತ್ವನಿಷ್ಠೆ ಯನ್ನು ಎಂದೂ ಮರೆಯಲಾಗದು.
ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸದಸ್ಯೆ ಶರಣೆ ಸ್ವಾತಿ ಅಂಗಡಿಯವರು ಕಲ್ಯಾಣ ಕ್ರಾಂತಿ ಸಂಸ್ಮರಣೋತ್ಸವದ 6 ನೆಯ ದಿನದ " ಶ್ರೀ ಅಕ್ಕನಾಗಲಾಂಬಿಕಾ ತಾಯಿಯವರ ಪೂಜೆ ಮತ್ತು ಚರಿತ್ರೆ ಪಠಣ" ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವರು ತಾ.04.10.2019 ರಂದು ಬೆಳಗಾವಿ ಜಿಲ್ಲಾ ಲಿಂಗಾಯತ ಧರ್ಮ ಮಹಾ ಸಭಾ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆ , & ಚಿಣ್ಣರ ಬಸವಾಂಕುರಗಳ ಸಂಯುಕ್ತ ಆಶ್ರಯದಲ್ಲಿ "ಕಲ್ಯಾಣ ಕ್ರಾಂತಿ ಸಂಸ್ಮರಣೋತ್ಸವನ್ನು ಬೆಳಗಾವಿ 'ವಿಶ್ವಗುರು ಬಸವ ಮಂಟಪ' ದಲ್ಲಿ ಏರ್ಪಡಿಸಲಾಗಿತ್ತು.
ಬಸವ ಧ್ವಜಾರೋಹಣವನ್ನು ನೆರವೇರಿಸಿ, ಅಧ್ಯಕ್ಷತೆಯನ್ನು ವಹಿಸಿ ಶರಣೆ ತೃಪ್ತಿ ಕಾಜಗಾರ್ ಮಾತನಾಡಿದರು. ಶರಣೆ ಶೀಲಾ ಗುಡಸರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಚನ ಸಂದೇಶ ನೀಡಿದರು. ಶರಣೆ ಪ್ರೇಮಾ ಗುಡಸ್ ಅತಿಥಿಯಾಗಿ ಪಾಲ್ಗೊಂಡು ಅನುಭಾವ ಮಂಡಿಸಿದರು.
ಶ್ರೀಬಸವ ಗುರು ಪೂಜೆಯನ್ನು ಶರಣರಾದ ಚನ್ನಂಗಿ, ಮಾರಯ್ಯ ಗಡಗಲಿ, ಸತ್ತಿಗೇರಿ ಮತ್ತು ಶ್ರೀ ಅಕ್ಕ ನಾಗಲಾಂಬಿಕಾ ಗುರುಗಳ ಭಾವಚಿತ್ರಕ್ಕೆ ಪೂಜೆಯನ್ನು ಶರಣೆಯರಾದ ಶೈಲಾ, ಮಹಾದೇವಿ ಗುಡಸ್, ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಯನ್ನು ಶರಣ ಶರಣಪ್ರಸಾದ್ ನೆರವೇರಿಸಿದರು. ಅಕ್ಕ ನಾಗಾಯಿ ತಾಯಿಯವರ ಚರಿತ್ರೆಯನ್ನು ಎಲ್ಲಾ ಶರಣ ಮತ್ತು ಶರಣೆಯರು ಭಕ್ತಿಯಿಂದ ಪಠಿಸಿದರು. ಶರಣೆ ರೂಪಾ ಪ್ರಸಾದ್ ನಿರೂಪಿಸಿದರು. ಶರಣೆ ನೀಲಗಂಗಾ ಪಾಟೀಲರು ವಂದಿಸಿದರು.