ಬೆಂಗಳೂರು, ಜೂ.4,ಇದೇ ತಿಂಗಳ 19 ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚಿಸಲು ನಾಳೆ ಮಹತ್ವದ ಜೆಡಿಎಸ್ ಶಾಸಕಾಂಗ ಸಭೆ ಕರೆಯಲಾಗಿದೆ. ಇಲ್ಲಿ ದೇವೇಗೌಡರ ಸ್ಪರ್ಧೆ ಬಗ್ಗೆ ಅಂತಿಮ ತೀರ್ಮಾನವಾಗಲಿರುವುದರಿಂದ ನಾಳಿನ ಶಾಸಕಾಂಗ ಸಭೆ ಬಹಳ ಕುತೂಹಲ ಮೂಡಿಸಿದೆ.ನಾಳೆ ಮಧ್ಯಾಹ್ನ 12.30ಕ್ಕೆ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಪಕ್ಷದ ಪ್ರಧಾನ ಕಚೇರಿ ಜೆ.ಪಿ ಭವನದಲ್ಲಿ ಸಭೆ ನಡೆಯಲಿದ್ದು, ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧೆಯೋ ಅಥವಾ ಬಿಜೆಪಿಗೆ ಸಾಥ್ ನೀಡುವುದೋ ಎನ್ನುವುದು ತೀರ್ಮಾನವಾಗಲಿದೆ.ಈಗಾಗಲೇ ದೇವೇಗೌಡರು ರಾಜ್ಯಸಭೆಗೆ ಹೋಗಬೇಕು ಎಂಬ ಒತ್ತಡ ಇದ್ದು,ಕಾಂಗ್ರೆಸ್‌ನ ಹಿರಿಯ ನಾಯಕರು ದೇವೇಗೌಡರಿಗೆ ಬೆಂಬಲ ಸೂಚಿಸಿದ್ದಾರೆ.
ಮತ್ತೊಂದು ಕಡೆ ಕಾಂಗ್ರೆಸ್ ಬೆಂಬಲಕ್ಕೆ ಅಷ್ಟೊಂದು ಮನಸ್ಸು ಮಾಡದ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ಸಾಥ್ ನೀಡುವ ಲೆಕ್ಕಾಚಾರದಲ್ಲಿಯೂ ಇದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಮಾತು ಕೇಳದೇ ಕಾಂಗ್ರೆಸ್ ಜೊತೆ ಹೋದರೆ ಅಡ್ಡ ಮತದಾನವಾಗಬಹುದೆಂಬ ಭೀತಿಯಲ್ಲಿ ದೇವೇಗೌಡರಿದ್ದಾರೆ. ಸ್ಪರ್ಧೆಗೆ ಸಿದ್ಧರಿದ್ದರೂ ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಗೊಂದಲ ಗೌಡರದ್ದಾಗಿದೆ. ಹೀಗಾಗಿ ದೇವೇಗೌಡರು ತಮ್ಮ ಸ್ಪರ್ಧೆಯನ್ನು ಇನ್ನೂ ಅಧಿಕೃತಗೊಳಿಸಿಲ್ಲ.ಒಂದು ಕಡೆ ಅನಾರೋಗ್ಯದ ಕಾರಣ ನೀಡಿ ಸ್ಪರ್ಧೆ ಬಗ್ಗೆ ಸ್ಪಷ್ಟನೆ ನೀಡದೇ ಜಾರಿಕೊಳ್ಳುತ್ತಿದ್ದು, ಈ ಎಲ್ಲದಕ್ಕೂ ನಾಳಿನ ಸಭೆಯಲ್ಲಿ ಸ್ಪಷ್ಟನೆ ಸಿಗಲಿದೆ. ಶಾಸಕರ ಜೊತೆ ಚರ್ಚಿಸಿ ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ಅಲ್ಲದೇ ವಿಧಾನಪರಿಷತ್‌ಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಸಹ ನಾಳೆ ಅಖೈರುಗೊಳ್ಳುವ ಸಾಧ್ಯತೆಯಿದೆ.ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು ಜೆಡಿಎಸ್‌ಗೆ ಒಂದು ಸ್ಥಾನಕ್ಕೆ ಮತಗಳು ಕಡಿಮೆ ಬೀಳುತ್ತವೆ. ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಯಾವುದೇ ಗೊಂದಲ ಇಲ್ಲ.ದೇವೇಗೌಡರು ಅಭ್ಯರ್ಥಿಯಾದರೆ ಉತ್ತಮ. ಆದರೆ ಅವರು ಆರೋಗ್ಯ ಸರಿ ಇಲ್ಲ ಬೇಡ ಎಂದು ಹೇಳುತ್ತಿರುವುದು ನಿಜ. ದೇವೇಗೌಡರು ನಿಲ್ಲದಿದ್ದರೆ ನಮ್ಮಲ್ಲಿ ಬೇರೆ ಯಾರಾದರೂ ನಿಲ್ಲಬೇಕು, ಕಾಂಗ್ರೆಸ್ ಬೆಂಬಲ ಅಥವಾ ಬಿಜೆಪಿ ಬೆಂಬಲ ಪಡೆಯುವ ಬಗ್ಗೆ ನಮ್ಮಲ್ಲಿ ಕೆಲವರು ಚರ್ಚೆ ನಡೆಸಿರುವುದು ನಿಜ. ತತ್ವ ಸಿದ್ಧಾಂತಕ್ಕೆ ಯಾರೂ ಲಕ್ಷ್ಯ ಕೊಡುವುದಿಲ್ಲ. ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳಿನ ಸಭೆಯಲ್ಲಿ ಅಂತಿಮ ನಿರ್ಧಾರ ಆಗಲಿದೆ ಎಂದರು.