ಜಿಲ್ಲಾಡಳಿತ ವತಿಯಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ
ವಿಜಯಪುರ 02: ಜನಸಾಮಾನ್ಯರ ಭಾಷೆಯಲ್ಲಿಯೇ ಸರಳವಾಗಿ ಹಾಗೂ ಸುಲಲಿತವಾಗಿ ವಚನಗಳನ್ನು ರಚಿಸಿ, ವಚನ ಸಾಹಿತ್ಯದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕಾಯಕವನ್ನು ಕೈಗೊಂಡವರು ದೇವರ ದಾಸಿಮಯ್ಯ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾದ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಯಕ ನಿಷ್ಠೆ, ಲಿಂಗ ಸಮಾನತೆ ಸೇರಿದಂತೆ ಅನೇಕ ವಿಷಯಗಳನ್ನು ತಮ್ಮ ವಚನಗಳ ಮೂಲಕ ನಮಗೆ ಕೊಡುಗೆ ನೀಡಿದ್ದಾರೆ. ತಿಳಿಸಿಕೊಟ್ಟಿರುವ ಕಾಯಕ ತತ್ವ, ನೈತಿಕ ಮೌಲ್ಯಗಳಂತಹ ಆದರ್ಶ ವಿಚಾರಗಳ ಚಿಂತನೆಗಳ ಅಳವಡಿಸಿಕೊಳ್ಳಬೇಕಾಗಿದೆ. ಲಿಂಗ ಸಮಾನತೆಯ ಪರಿಕಲ್ಪನೆಯನ್ನು ಪ್ರತಿಪಾದಿಸಿ, ಸಮಾನತೆಯನ್ನು ಸಾರಿದ ಶರಣ ದೇವರ ದಾಸಿಮಯ್ಯನವರು. ರಾಮನಾಥ ಎಂಬ ಅಂಕಿತ ನಾಮದೊಂದಿಗೆ ಹಲವು ವಚನಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಹಲವು ವಚನಗಳ ಅರ್ಥ, ಸಾರಾಂಶ ವಚನ ಸಾಹಿತ್ಯದ ತತ್ವಗಳು, ಅವರ ಜೀವನಾದರ್ಶಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯವಾಗಬೇಕು. ಆ ಮೂಲಕ ಮಹನೀಯರ ಜಯಂತಿ ಆಚರಣೆಯ ಹಿನ್ನೆಲೆಯಾಗಿ ದಾರ್ಶನಿಕರು ಈ ಸಮಾಜಕ್ಕೆ ನೀಡಿದ ಸಂದೇಶಗಳು ಅವರ ಆಶಯಗಳನ್ನು ನೆನಪು ಮಾಡಿಕೊಳ್ಳುವುದೇ ಆಗಿದೆ ಎಂದು ಅವರು ಹೇಳಿದರು.ಡಾ.ಸಂಗಮೇಶ ಮೇತ್ರಿ ಅವರು ಉಪನ್ಯಾಸ ನೀಡಿ, ದಾರ್ಶನಿಕರ ಆದರ್ಶ ವಿಚಾರಗಳಿಗೆ ಪ್ರಾಮುಖ್ಯತೆ ನೀಡಿ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ಕಾಯಕ ಸಿದ್ದಾಂತವನ್ನು ಪ್ರತಿಪಾದಿಸಿದವರು ದೇವರ ದಾಸಿಮಯ್ಯ ಅವರು ಆಡುಮಾತಿನಲ್ಲಿ ತಮ್ಮ ವಚನಗಳ ಮೂಲಕ ಸಮಾಜಕ್ಕೆ ಹಿತೋಪದೇಶಗಳನ್ನು ನೀಡಿದವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿರೇಶ ವಾಲಿ ಹಾಗೂ ತಂಡದವರು ವಚನ ಗಾಯನ ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ, ಮಹಾನಗರ ಪಾಲಿಕೆಯ ಉಪಾಯುಕ್ತರಾದ ನಾರಾಯಣಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಭೋವಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.