ದೇವಧರ್ ಟ್ರೋಫಿ ಫೈನಲ್: ಭಾರತ 'ಸಿ' ಗೆಲುವಿಗೆ 284 ರನ್ ಗುರಿ ನೀಡಿದ ಭಾರತ 'ಬಿ'

ರಾಂಚಿ, ನ. 4:   ಯುವ ಆಟಗಾರ ಯಶಸ್ವಿ ಜೈಸ್ವಾಲ್ (54) ಹಾಗೂ ಅನುಭವಿ ಕೇದಾರ್ ಜಾದವ್ (86) ಅವರ ಭರ್ಜರಿ ಆಟದ ನೆರವಿನಿಂದ ದೇವಧರ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಬಿ ತಂಡ, ಭಾರತ ಸಿ ವಿರುದ್ಧ 50 ಓವರ್ ಗಳಲ್ಲಿ 7 ವಿಕೆಟ್ ಗೆ 283 ರನ್ ಕಲೆ ಹಾಕಿದೆ.   

ಮೊದಲು ಬ್ಯಾಟ್ ಮಾಡಿದ ಬಿ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಯಶಸ್ವಿ ಜೈಸ್ವಾಲ್ ಅವರು 79 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 54 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.   

ಐದನೇ ವಿಕೆಟ್ ಗೆ ಕೇದಾರ್ ಜಾದವ್ ಹಾಗೂ ನೀತಿಶ್ ರಾಣಾ (20) ಜೋಡಿ ತಂಡಕ್ಕೆ 79 ರನ್  ಸೇರಿಸಿದರು. ಆರನೇ ವಿಕೆಟ್ ಗೆ ಕೇದಾರ್ ಮತ್ತು ವಿಜಯ್ ಶಂಕರ್ ಅವರು 74 ರನ್ ಕಾಣಿಕೆ ನೀಡಿದರು. ವಿಜಯ್ ಶಂಕರ್ 33 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 45 ರನ್ ಸಿಡಿಸಿದರು.

ಕೇದಾರ್ ಜಾದವ್ 94 ಎಸೆತಗಳಲ್ಲಿ 86 ರನ್ ಬಾರಿಸಿದರು. ಕೆಳ ಕ್ರಮಾಂಕದಲ್ಲಿ ಕರ್ನಾಟಕದ ಕೃಷ್ಣಪ್ಪ ಗೌತಮ್ 10 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಬಾರಿಸಿ ರನ್ ವೇಗಕ್ಕೆ ಚುರುಕು ನೀಡಿದರು. ಭಾರತ ಸಿ ಪರ ಇಶಾನ್ ಪರೋಲ್ 43 ರನ್ ನೀಡಿ 5 ವಿಕೆಟ್ ಪಡೆದರು.