ದೇವರಾಜು ಅರಸು ಪುಣ್ಯಸ್ಮರಣೆ: ಗಣ್ಯರ ಗೌರವ ನಮನ

ಬೆಂಗಳೂರು, ಜೂ.6,ಮಾಜಿ ಮುಖ್ಯಮಂತ್ರಿ, ಮುತ್ಸದ್ದಿ ನಾಯಕ ಡಿ.ದೇವರಾಜ ಅರಸು  ಅವರ 38ನೇ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಗೌರನ ನಮನ ಸಲ್ಲಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ಸಾಮಾಜಿಕ ನ್ಯಾಯದ ಹಳಿಯ ಮೇಲೆ ಅಭಿವೃದ್ಧಿಯ ಬಂಡಿಯನ್ನು ಓಡಿಸುವ  ಹೊಸ ಅಭಿವೃದ್ಧಿ ಮಾದರಿಯ‌ ಮೂಲಕವೇ ನಾಡು ಕಟ್ಟಿದ ಮಾಜಿ ಮುಖ್ಯಮಂತ್ರಿ, ಮುತ್ಸದ್ದಿ ನಾಯಕ ಡಿ.ದೇವರಾಜ ಅರಸು ನಮ್ಮೆಲ್ಲರ‌ ಆದರ್ಶ.   ಈ ಪರಿವರ್ತನೆಯ ಹರಿಕಾರನಿಗೆ ಪುಣ್ಯಸ್ಮರಣೆಯ ದಿನದ ಗೌರವಪೂರ್ವಕ ನಮನ ಎಂದು ತಿಳಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ರಾಜ್ಯದಲ್ಲಿ ಸಾಮಾಜಿಕ ನ್ಯಾಯಕ್ಕೆ ಮುನ್ನುಡಿ ಬರೆದ ಧೀಮಂತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಪುಣ್ಯಸ್ಮರಣೆಯ ದಿನವಾದ ಇಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ ಎಂದು ತಿಳಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆ ಮೂಲಕ ಸಂಚಲನ ಮೂಡಿಸಿದ ಧೀಮಂತ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ಅವರು ನಾಡಿಗೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ ನಮಿಸೋಣ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ ಗೌರವ ಸಲ್ಲಿಸಿದ್ದಾರೆ.ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಟ್ವೀಟ್ ಮಾಡಿ, ಸಾಮಾಜಿಕ ಸಮಾನತೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಪುಣ್ಯತಿಥಿಯಂದು ನನ್ನ ಗೌರವ ನಮನಗಳು.   ಭೂ ಸುಧಾರಣೆ, ಶೋಷಿತ ವರ್ಗದ ಏಳಿಗೆಗಾಗಿ ವಿಶೇಷ ಕಾಳಜಿ ತೋರಿ, ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಧೀಮಂತ ನಾಯಕನ ಸತ್ಕಾರ್ಯಗಳನ್ನು ಸ್ಮರಿಸೋಣ ಎಂದು ತಿಳಿಸಿದ್ದಾರೆ.

ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಟ್ವೀಟ್ ಮಾಡಿ, ಹಿಂದುಳಿದ ವರ್ಗಗಳ ಹರಿಕಾರ, ಸೋಷಿತ ವರ್ಗಗಳ ದನಿಯಾಗಿದ್ದ, ರಾಜ್ಯದಲ್ಲಿ ಭೂಸುಧಾರಣೆ ಸೇರಿದಂತೆ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತಂದಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ಅವರ ಪುಣ್ಯತಿಥಿ ಇಂದು.   ಅವರ ಚರಣಗಳಿಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸೋಣ ಎಂದು ತಿಳಿಸಿದ್ದಾರೆ.ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ಜನನಾಯಕ, ಬಡವರ ಧ್ವನಿ, 'ಹಿಂದುಳಿದ ವರ್ಗಗಳ ಹರಿಕಾರ' ಮಾಜಿ ಮುಖ್ಯಮಂತ್ರಿ ಶ್ರೀ ಡಿ.ದೇವರಾಜ್ ಅರಸ್ ಅವರ ಪುಣ್ಯತಿಥಿಯಂದು ಸಾಮಾಜಿಕ ನ್ಯಾಯದ ಆ ಹಿರಿಯ ಪ್ರತಿಪಾದಕರಿಗೆ ಶತಶತ ಪ್ರಣಾಮಗಳು. ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವರು ಜಾರಿಗೆ ತಂದ  ಸುಧಾರಣೆಗಳು ಸಾಮಾಜಿಕ ಬದಲಾವಣೆಗಳಿಗೆ ನಾಂದಿ ಹಾಡಿದೆ ಎಂದು ತಿಳಿಸಿದ್ದಾರೆ. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟ್ವೀಟ್ ಮಾಡಿ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ನನ್ನ ಶತ ಕೋಟಿ ನಮನಗಳು ಎಂದು ತಿಳಿಸಿದ್ದಾರೆ.