ತೆಹ್ರಾನ್, ನ 11 : ಇರಾನ್ ನಲ್ಲಿ 53 ಶತಕೋಟಿ ಬ್ಯಾರೆಲ್ ಕಚ್ಚಾ ತೈಲದ ನಿಕ್ಷೇಪ ಪತ್ತೆಯಾಗಿದೆ ಎಂದು ಅಧ್ಯಕ್ಷ ಹಸನ್ ರೌಹಾನಿ ಘೋಷಿಸಿದ್ದಾರೆ. ಅಮೆರಿಕದ ಆರ್ಥಿಕ ದಿಗ್ಬಂಧನದ ಸಂಕಷ್ಟ ಎದುರಿಸುತ್ತಿರುವ ಇರಾನ್ ಆರ್ಥಿಕತೆಗೆ ಇದು ಚೇತರಿಕೆ ನೀಡುವ ಆಶಾಭಾವವಿದೆ. ಈ ತೈಲ ನಿಕ್ಷೇಪ ಖುಝೆಸ್ತಾನ್ ಪ್ರಾಂತ್ಯದಲ್ಲಿದ್ದು 2,400 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು 80 ಮೀಟರ್ ಆಳವಿದೆ ಎಂದು ಹೇಳಲಾಗಿದೆ. ಅಂದಾಜು 65 ಶತಕೋಟಿ ಬ್ಯಾರೆಲ್ ನಷ್ಟು ಕಚ್ಚಾ ತೈಲ ಹೊಂದಿರುವ ಅಹ್ವಾಜ್ ನಿಕ್ಷೇಪದ ನಂತರ ಎರಡನೇ ಅತಿದೊಡ್ಡ ನಿಕ್ಷೇಪವಾಗಿದೆ. ಇರಾನ್ ನಾಲ್ಕನೇ ಅತಿದೊಡ್ಡ ತೈಲ ನಿಕ್ಷೇಪ ರಾಷ್ಟ್ರ ಹಾಗೂ ಎರಡನೇ ಅತಿದೊಡ್ಡ ಅನಿಲ ನಿಕ್ಷೇಪ ರಾಷ್ಟ್ರ ಎಂದು ಅಮೆರಿಕದ ಇಂಧನ ಮಾಹಿತಿ ಆಡಳಿತ ಹೇಳಿದೆ. ಈಗ ಪತ್ತೆಯಾಗಿರುವ ಹೊಸ ನಿಕ್ಷೇಪದಲ್ಲಿ ಅಂದಾಜಿಸಿರುವ ಸಾಮಥ್ರ್ಯದಷ್ಟು ತೈಲ ದೊರೆತದ್ದೇ ಆದಲ್ಲಿ, ಇರಾನ್ ಮೂರನೇ ಸ್ಥಾನಕ್ಕೇರಲಿದೆ ಎಂದು ಹೇಳಲಾಗಿದೆ.