ವಿಜಯಪುರ, ಜ 27,ಪಕ್ಷ ಮತ್ತು ಸರ್ಕಾರದ ಹಿತ ದೃಷ್ಟಿಯಿಂದ ವರಿಷ್ಠರು ಸೂಚನೆ ನೀಡಿದರೆ ಉಪಮುಖ್ಯಮಂತ್ರಿ ಮತ್ತು ಮಂತ್ರಿ ಸ್ಥಾನ ತೊರೆಯಲು ಸಿದ್ಧ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲ ವಿಸ್ತರಣೆ ಹಿನ್ನೆಲೆಯಲ್ಲಿ ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಬೇಕೆಂಬ ಕೂಗು ಕೇಳಿ ಬಂದಿರುವ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಉಪಮುಖ್ಯಮಂತ್ರಿ, ಸಚಿವ ಸ್ಥಾನ ಗಳನ್ನು ತ್ಯಾಗ ಮಾಡುವಂತೆ ಪಕ್ಷ ಸೂಚಿಸಿದರೆ ಇಂದೇ ನಾನು ತ್ಯಾಗ ಮಾಡುತ್ತೇನೆ. ಪಕ್ಷ ಯಾವ ನಿರ್ಣಯ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ ಎಂದರು.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂಧ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಗೆ ಹೇಳುತ್ತಾರೋ ಹಾಗೆ ನಾನು ಚಾಚು ತಪ್ಪದೆ ನಡೆದುಕೊಳ್ಳುತ್ತೇನೆ. ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯ ಕೇಳಿ ಬಂದಿರುವ ಬಗ್ಗೆ ಮಾತನಾಡಿದ ಗೋವಿಂದ ಕಾರಜೋಳ, ಈ ಕುರಿತು ತಮಗೆ ಮಾಹಿತಿ ಇಲ್ಲ. ಉಪಮುಖ್ಯಮಂತ್ರಿಯಾದ ಬಳಿಕ ತಾವು ಹೆಚ್ಚು ಸೌಲಭ್ಯ ಪಡೆದಿಲ್ಲ. ಹೆಚ್ಚಿನ ಭದ್ರತೆಯೂ ಬೇಡ ಎಂದು ಮೊದಲೇ ತಿಳಿಸಿದ್ದೇನೆ ಎಂದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರಿಗೆ ಸ್ಥಾನಮಾನ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಯಾರ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಗೊತ್ತಿಲ್ಲದ ಸಂಗತಿಗಳ ಬಗ್ಗೆ ಮಾತನಾಡದಿರುವುದೇ ಸೂಕ್ತ ಎಂದರು.
ರಾಜ್ಯದ ಹಲವೆಡೆ ಪ್ರವಾಸ ಕೈಗೊಂಡಿದ್ದು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಮಗೆ ಮಾಹಿತಿ ಇಲ್ಲ. ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲಗಳಿಲ್ಲ, ತಾವು ಬುಧವಾರ ಬೆಂಗಳೂರಿಗೆ ತೆರಳಿದ್ದು, ಮುಖ್ಯ ಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಆಗಿ ಚರ್ಚೆ ನಡೆಸುತ್ತೇನೆ ಎಂದರು. ಸಂಫುಟ ವಿಸ್ತರಣೆ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಗೆ ಸ್ಥಾನಮಾನ ಸಿಗಬಹುದು ಎಂಬ ನಿರೀಕ್ಷೆ ಇದೆ, ಅದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ, ಜಿಲ್ಲೆಗೆ ಖಂಡಿತವಾಗಿ ಅವಕಾಶ ಸಿಗಬೇಕು ಎಂಬುದು ನನ್ನ ಅಪೇಕ್ಷೆಯೂ ಆಗಿದೆ, ಅಖಂಡ ಜಿಲ್ಲೆ ಇದ್ದಾಗ ನಾನು ವಿಜಯಪುರದವನಾಗಿದ್ದೆ. ಜಿಲ್ಲೆ ವಿಂಗಡಣೆ ಆದ ಬಳಿಕ ಬಾಗಲಕೋಟೆಗೆ ಸೇರ್ಪಡೆಯಾಗಿದ್ದೇನೆ. ಹಾಗಾಗಿ ವಿಜಯಪುರ- ಬಾಗಲಕೋಟೆ ಜಿಲ್ಲೆಗಳಿಗೆ ಸಚಿವ ಸ್ಥಾನಗಳು ಸಿಗಲಿ ಎಂಬುದು ನನ್ನ ಆಸೆಯೂ ಆಗಿದೆ ಎಂದು ತಿಳಿಸಿದರು.