ಸಿಯೋಲ್, ನ 7: ದಕ್ಷಿಣ ಕೊರಿಯಾದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ಸೈನಿಕರ ವೆಚ್ಚವನ್ನು ಸರಿದೂಗಿಸಲು ಮತ್ತು ಈ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ನಿರ್ವಹಿಸಲು 4.7 ಶತಕೋಟಿ ಡಾಲರ್ ಪಾವತಿಸಬೇಕು ಎಂದು ಅಮೆರಿಕ, ದಕ್ಷಿಣ ಕೊರಿಯಾವನ್ನು ಒತ್ತಾಯಿಸಿರುವುದಾಗಿ ಇಲ್ಲಿನ ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ. ಅಮೆರಿಕ ವಿದೇಶಾಂಗ ಇಲಾಖೆಯ ಸಂಧಾನ ಮಾತುಕತೆಗಳ ಹಿರಿಯ ಸಲಹೆಗಾರ ಜೇಮ್ಸ್ ಡಿಹಾರ್ಟ್ ಮತ್ತು ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ವ್ಯವಹಾರಗಳ ವಿದೇಶಾಂಗ ಸಹಾಯಕ ಕಾರ್ಯದರ್ಶಿ ಡೇವಿಡ್ ಸ್ಟಿಲ್ವೆಲ್ ಅವರು ಈ ವಾರದ ಆರಂಭದಲ್ಲಿ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿ ರಕ್ಷಣಾ ವೆಚ್ಚ ಹಂಚಿಕೆ ಕುರಿತು ಚರ್ಚಿಸಿದರು. '4.7 ಬಿಲಿಯನ್ ಡಾಲರ್ ಭಾಗಶ: ರಕ್ಷಣಾ ವೆಚ್ಚವನ್ನು ಭರಿಸುವಂತೆ ಅಮೆರಿಕ ಹೇಳಿಕೊಂಡಿದೆ. ಅಮೆರಿಕ ಒದಗಿಸಿದ ರಕ್ಷಣೆಗೆ ದಕ್ಷಿಣ ಕೊರಿಯಾ ಹೆಚ್ಚಿನ ವೆಚ್ಚ ಭರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಚ್ಛಿಸಿದ್ದಾರೆ ಎಂದು ಡಿಹಾರ್ಟ್ ಹೇಳಿಕೆಯನ್ನು ಉಲ್ಲೇಖಿಸಿ ಚೋಸುನ್ ಇಲ್ಬೊ ಪತ್ರಿಕೆ ವರದಿ ಮಾಡಿದೆ. ರಕ್ಷಣಾ ವೆಚ್ಚವನ್ನು ಪಾವತಿಸದಿದ್ದರೆ ದಕ್ಷಿಣ ಕೊರಿಯಾದಿಂದ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಬಹುದೆಂಬ ಆತಂಕಗಳಿವೆ ಎಂದು ಪತ್ರಿಕೆ ಉಲ್ಲೇಖಿಸಿದೆ. ಈ ಮಧ್ಯೆ ದಕ್ಷಿಣ ಕೊರಿಯಾ ಈ ಬೇಡಿಕೆಗೆ ಪ್ರತಿಕ್ರಿಯಿಸಿ ಇಂತಹ ಪಾವತಿಗಳನ್ನು ಮಾಡಲು ಸಂಸತ್ತಿನ ಅನುಮೋದನೆ ಅಗತ್ಯವಿರುತ್ತದೆ. ಅಲ್ಲದೆ, ಸಂಸದರು ದೇಶದ ಹೊರಗೆ ರಕ್ಷಣಾ ಚಟುವಟಿಕೆಗಳ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಸೇನಾ ವೆಚ್ಚ ಹೆಚ್ಚಿಸಲು ಅಮೆರಿಕ ವಿಶ್ವದಾದ್ಯಂತ ತನ್ನ ಮಿತ್ರರಾಷ್ಟ್ರಗಳಿಗೆ ಪದೇ ಪದೇ ಕರೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ದಕ್ಷಿಣ ಕೊರಿಯಾದಲ್ಲಿ ಸದ್ಯ ಸುಮಾರು 25 ಸಾವಿರ ಅಮೆರಿಕ ಸೈನಿಕರು ವಿವಿಧ ಶಸ್ತ್ತ್ರಾಸ್ತ್ರ ಹಾಗೂ ಸಾಧನಗಳೊಂದಿಗೆ ಬೀಡುಬಿಟ್ಟಿದ್ದಾರೆ. ಇದರ ವೆಚ್ಚ ಹಂಚಿಕೆ ಕುರಿತು ಎರಡೂ ದೇಶಗಳು ಮಾತುಕತೆಯಲ್ಲಿ ತೊಡಗಿವೆ.