ಮಹಿಳಾ ಪ್ರತಿಭೆ ಅನಾವರಣಕ್ಕೆ ಸಂಸ್ಕೃತಿ ಇಲಾಖೆ ಬದ್ಧ: ರಂಗಣ್ಣವರ

ಕೊಪ್ಪಳ 03: ಮಹಿಳೆಯರಲ್ಲಿರುವ ಕಲೆ, ನಾಟಕ, ವಿದ್ಯೆ, ನೃತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿನ ಪ್ರತಿಭೆಗಳನ್ನು ಅನಾವರಣ ಮಾಡಲು ಕನ್ನಡ ಸಂಸ್ಕೃತಿ ಇಲಾಖೆ ತುಂಬಾ ಶ್ರಮಿಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ಧಲಿಂಗೇಶ ಕೆ. ರಂಗಣ್ಣವರ ಹೇಳಿದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ  (ಫೆ.03) ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಔದ್ಯೋಗಿಕ ಜವಾಬ್ದಾರಿಯೊಂದಿಗೆ ಸಂಸಾರವನ್ನು ಸುಂದರವನ್ನಾಗಿಸುವ ಹೊಣೆಗಾರಿಕೆ ಮಹಿಳೆಯರದ್ದಾಗಿದೆ. ಯಾವುದೇ ಸಂದರ್ಭ ಎದುರಾದರೂ ಶಾಂತಿಯುತವಾಗಿ ಯೋಚಿಸುವ ಮತ್ತು ಜವಾಬ್ದಾರಿಗಳನ್ನು ನಿಭಾಯಿಸುವಗುಣ ಮಹಿಳೆಯರಲ್ಲಿದೆ. ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ.  ಮಕ್ಕಳಿಗೆ ಶಿಕ್ಷಣ ಕೊಡಿಸಿ, ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ಮಹಿಳೆಯರದ್ದೇ ಆಗಿರುವುದರಿಂದ ಪ್ರತಿಯೊಬ್ಬರು ಮಹಿಳೆಯರನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.  

ಹಾಲ್ಕುರಿಕಿ ನಾಟಕ ತಂಡದ ನಿರ್ದೇಶಕಿ ಶೀಲಾ ಹಾಲ್ಕುರಿಕಿ ಅವರು ಮಾತನಾಡಿ, ಪುರುಷರಿಗೆ ಸರಿಸಮವಾಗಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಅಧ್ವೀತಿಯ ಸಾಧನೆ ಮಾಡುತ್ತಿರುವುದು ಗಮನಾರ್ಹ. ಆದ್ದರಿಂದ ಸರ್ಕಾರ ಮಹಿಳೆಯರ ಸಾಧನೆಗೆ ಪ್ರೊತ್ಸಾಹಿಸಿ, ಅವರ ಪ್ರತಿಭೆಯನ್ನು ಅನಾವರಣ ಮಾಡಲು ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಡಬೇಕು ಎಂದು ಅಭಿಪ್ರಾಯಪಟ್ಟರು.

ವಿವಿಧ ಕಲೆಗಳ ಪ್ರದರ್ಶನ: ಕಾರ್ಯಕ್ರಮದಲ್ಲಿ 16 ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು.  ಅದರಲ್ಲಿ ಡೊಳ್ಳು ಕುಣಿತ, ವೀರಗಾಸೆ, ಸಗಮ ಸಂಗೀತ, ಶಾಸ್ತ್ರೀಯ ಸಂಗೀತ, ಸುಗ್ಗಿ ಕುಣಿತ, ನಾಟಕ, ಬಂಜಾರ ನೃತ್ಯ, ಭರತನಾಟ್ಯ, ಶಾಸ್ತ್ರೀಯ ನೃತ್ಯಗಳ ಕಲವರ ಮಹಿಳಾ ಸಾಂಸ್ಕೃತಿಕ ಉತ್ಸವಕ್ಕೆ ವೈಭವ ತಂದಿತು.

ಸಮಾರಂಭದಲ್ಲಿ ಗಿರಿಜಾದೇವಿ, ಅಂಬಿಕಾ ಉಪ್ಪಾರ, ಜಿ. ವಂದನಾ, ಚೈತ್ರಾ ಪತ್ತಾರ, ಸುಧಾ ಬನ್ನಿಕೊಪ್ಪ, ಶರವತಿ, ಶೀಲಾ ಹಾಲ್ಕುರಕಿ, ಅಫ್ರೀನ್ ಎಸ್.ಎಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಶಕುಂತಲಾ ಬೆನ್ನಾಳ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.