ಗದಗ 18 : ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಗದಗ ತಾಲೂಕಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ನದಿ ನೀರಿನ ವ್ಯವಸ್ಥೆ ಸೇರಿದಂತೆ ಸ್ವಂತ ಕಟ್ಟಡದಲ್ಲಿರುವ 27 ಹಾಸ್ಟೆಲ್ಗಳಿಗೆ ಶುದ್ಧನೀರು, ಸೋಲಾರ್, ಬಿಸಿನೀರು, ಡೈನಿಂಗ್ ಟೇಬಲ್, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯದ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ದಲಿಂಗೇಶ್ವರ ಎಚ್. ಪಾಟೀಲ್ ಹೇಳಿದರು.
ಗದಗ ಜಿಲ್ಲಾಡಳಿತ ಭವನದ ಜಿಲ್ಲಾಧ್ಯಕ್ಷರ ಕಚೇರಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಕ್ ನಂತರ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 62 ವಿದ್ಯಾರ್ಥಿ ನಿಲಯಗಳಿವೆ. ಇವುಗಳಲ್ಲಿ 27 ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಕೆಲವು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ. ಇನ್ನು ಕೆಲವು ನಿವೇಶನ ಹೊಂದಿದ್ದರೂ ಕಟ್ಟಡಗಳನ್ನು ಹೊಂದಿಲ್ಲ. ಹೀಗಾಗಿ ನಿವೇಶನ ಹೊಂದಿರುವ ಹಾಸ್ಟೆಲ್ಗಳಿಗೆ ಹೊಸ ಕಟ್ಟಡ ಹಾಗೂ ಹೆಚ್ಚುವರಿಯಾಗಿ 10 ಹಾಸ್ಟೆಲ್ಗಳ ಅವಶ್ಯಕತೆ ಇದ್ದು, ಸಂಬಂಧಿತ ಇಲಾಖೆಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ಕಳೆದ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳೇ ಹೆಚ್ಚು ಅನುತ್ತೀರ್ಣರಾಗಿದ್ದು, ಈ ಕುರಿತು ಆಯಾ ಇಲಾಖೆಗಳು ಎಲ್ಲ ತಾಲೂಕಾಧಿಕಾರಿಗಳು ಎಚ್ಚರವಹಿಸಬೇಕು. ಪರೀಕ್ಷೆಗೆ ಇನ್ನೂ ಎರಡು ತಿಂಗಳಿದ್ದು, ವಾರದಲ್ಲಿ ಎರಡು ಬಾರಿಯಾದರೂ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಅಭ್ಯಾಸದ ಕುರಿತು ಗಮನಹರಿಸಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕು. ಆಹಾರದ ಗುಣಮಟ್ಟ ಕಾಪಾಡಿಕೊಂಡು ಊಟದ ವ್ಯವಸ್ಥೆಯಲ್ಲಿ ತಾರತಮ್ಯವಾಗದಂತೆ ನಿಗಾವಹಿಸಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಗದಗ, ಮುಂಡರಗಿ, ರೋಣ, ನರಗುಂದ ಹಾಗೂ ಶಿರಹಟ್ಟಿ ತಾಲೂಕಿನಲ್ಲಿರುವ ವಸತಿ ನಿಲಯಗಳ ವ್ಯವಸ್ಥೆ, ನಿಲಯಗಳಲ್ಲಿರುವ ಸಮಸ್ಯೆಗಳ ಕುರಿತು ತಾಲೂಕಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಜಿಲ್ಲಾಧ್ಯಕ್ಷರು ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಇಲಾಖೆಯ ಕಾರ್ಯಕ್ರಮಗಳ ಮಾಹಿತಿ ನೀಡಿದ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಶ್ರೀಮತಿ ಆರ್.ಡಿ.ಹೊಸಮನಿ, ಪ್ರತಿವರ್ಷ ಪ್ರಥಮ ದಜರ್ೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗುತ್ತದಲ್ಲದೇ, ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಪರೀಕ್ಷೆಗಳ ಕುರಿತು ತರಬೇತಿ ಕಾರ್ಯಾಗಾರ ಏರ್ಪಡಿಸಲಾಗುತ್ತದೆ. ವಿದ್ಯಾಸಿರಿ ಯೋಜನೆಯಡಿಯಲ್ಲಿ ವಿದ್ಯಾಥರ್ಿಗಳಿಗೆ ಶಿಷ್ಯವೇತನ ಹಾಗೂ ನಿರುದ್ಯೋಗಿ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರದ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿ ನಿಲಯಗಳಿಗೆ ಮೂಲಭೂತ ಸೌಕರ್ಯಕ್ಕೆ ತಗಲಬಹುದಾದ ಅಂದಾಜು ವೆಚ್ಚ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾಧಿಕಾರಿಗಳಾದ ಬಸವರಾಜ ಬಳ್ಳಾರಿ, ರವೀ ಗುಂಜಿಕರ, ಎಂ.ಕೆ.ಸುರಕೋಡ, ಎಂ.ಎಚ್.ಕಮ್ಮಾರ ಹಾಗೂ ಎ.ಎಸ್.ಪಾಟೀಲ್ ಸಭೆಯಲ್ಲಿ ಭಾಗವಹಿಸಿದ್ದರು.