ದೊಣ್ಣೆಗುಡ್ಡದ ದುರ್ಗಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಗೆ ಆಗ್ರಹ: ಶ್ರೀ ದಯಾನಂದ ಸ್ವಾಮೀಜಿ

Demand to stop animal sacrifice in Donnegudda Durga Devi fair: Sri Dayananda Swamiji

ಕೊಪ್ಪಳ   27 : ಜಿಲ್ಲೆಯ ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡದ ದುರ್ಗಾ ದೇವಿ ಜಾತ್ರೆಯು ಇಂದು ಫೆಬ್ರವರಿ 28 ರಿಂದ ಮಾರ್ಚ್‌ 4 ರವರೆಗೆ ಜರುಗಲಿದ್ದು ಈ ಜಾತ್ರೆಗೆ ಸಹಸ್ರಾರು ಭಕ್ತರು ಆಗಮಿಸಿ ದೇವಿಗೆ ಪೂಜಾದಿ ಧಾರ್ಮಿಕ ಸೇವಾ ಕೈಂಕರ್ಯಗಳನ್ನು ಸಲ್ಲಿಸಲಿದ್ದಾರೆ. 

ಇದೇ ಸಂದರ್ಭದಲ್ಲಿ ಹಲವು ಭಕ್ತರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಹರಕೆಯ ರೂಪದಲ್ಲಿ ಆಡು, ಕುರಿ, ಕೋಳಿ, ಕೋಣ ಮುಂತಾದ ಪ್ರಾಣಿಗಳ ಬಲಿ ನೀಡಲಿದ್ದು ಇದು   ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಭಂದಕ ಅಧಿನಿಯಮ 1959 ಮತ್ತು ನಿಯಮಗಳು 1963 ಹಾಗೂ ತಿದ್ದುಪಡಿ ಕಾಯ್ದೆ 1975ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಈ ಪ್ರಾಣಿಬಲಿಯನ್ನು ಮೇಲ್ಕಂಡ ಕಾನೂನು ಹಾಗೂ ಹೈ ಕೋರ್ಟ್‌ ಆದೇಶಗಳ ಅಡಿಯಲ್ಲಿ ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಹಾಗೂ ಪ್ರಾಣಿಗಳನ್ನು ಜಾತ್ರಾ ಪರಿಸರಕ್ಕೆ ಬಾರದಂತೆ ಕಟ್ಟೆಚ್ಚರ ವಹಿಸಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು-ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘ ಹಾಗೂ ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿಯವರು ಕೊಪ್ಪಳ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿರುವುದಾಗಿ ಹೇಳಿದರು.  

ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕರ್ನಾಟಕ ಗೋವಂಶ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020 ರ ಪ್ರಕಾರ 13 ವರ್ಷದ ಒಳಗಿನ ಎಮ್ಮೆ, ಕೋಣ ಹಾಗೂ ಅವುಗಳ ಕರುಗಳ ಹತ್ಯೆಯೂ ಶಿಕ್ಷಾರ್ಹ ಅಪರಾಧವಾಗಿದ್ದು 3 ರಿಂದ 7 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 50 ಸಾವಿರದಿಂದ 10 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಸ್ವಾಮೀಜಿಯವರು ತಿಳಿಸಿದರು.ಪ್ರಾಣಿಬಲಿಯು ಅನಾಗರೀಕವು ಅಂಧಶ್ರದ್ಧೆಯೂ, ಪರಿಸರ ಮಾಲಿನ್ಯಕಾರಕ ಆಗಿದ್ದು ಇದು ಕಾನೂನು ಮತ್ತು ಧರ್ಮ ವಿರೋಧಿ ಆಗಿದೆ ಆದ್ದರಿಂದ ಭಕ್ತಾದಿಗಳು ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ಸ್ವಾಮೀಜಿ ಭಕ್ತರಲ್ಲಿ ವಿನಂತಿಸಿದ್ದಾರೆ. ದೇವಾಲಯಗಳು ವಧಾಲಯಗಳಾಗದೆ ದಿವ್ಯಾಲಯವಾಗಬೇಕು, ಜಾತ್ರಾ ಪರಿಸರಗಳ ಧಾರ್ಮಿಕ ಸ್ಥಾನಗಳು ಕಟುಕರ ಕೇರಿಗಳಾಗಬಾರದು ಜೀವ ತೆಗೆಯುವ ಮೃತ್ಯು ಕೂಪವಾಗಬಾರದು, ಪ್ರಾಣಿಹಿಂಸೆ ಮತ್ತು ಮದ್ಯ - ಮಾದಕ ಪದಾರ್ಥಗಳಿಂದ ಮುಕ್ತವಾಗಿರಬೇಕು ಅಹಿಂಸೆ ಕರುಣೆ ಪ್ರೇಮ ಜೀವದಯೆ ಮಾನವೀಯತೆ ಆಧ್ಯಾತ್ಮಿಕತೆ ಮುಂತಾದ ದಿವ್ಯ ಮೌಲ್ಯಗಳನ್ನು ಸಾರುವ ಸುಸಂಸ್ಕಾರ ನೀಡುವ ದಿವ್ಯ ಧಾಮಗಳಾಗಬೇಕು ಸಧ್ಬಕ್ತಿ ಸುಜ್ಞಾನ ಮತ್ತು ಸದಾಚಾರಗಳ ತ್ರಿವೇಣಿ ಸಂಗಮವಾಗಬೇಕು ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ಸಮಾಜ, ದೇವಾಲಯದ ಆಡಳಿತ ಮಂಡಳಿ ಹಾಗೂ ಸರ್ಕಾರ ಮತ್ತು ಸುದ್ದಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು ಎಂದು ವಿನಂತಿ ಮಾಡಿಕೊಂಡರು. 

ಈ ಕುರಿತು ಈಗಾಗಲೇ ಕರ್ನಾಟಕ ಸರ್ಕಾರದ  ಮುಖ್ಯ  ಕಾರ್ಯದರ್ಶಿಗಳು ಗೃಹ ಮತ್ತು ಪಶು ಸಂಗೋಪನಾ ಇಲಾಖೆ ಕಾರ್ಯ ದರ್ಶಿಗಳು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕೊಪ್ಪಳ ಜಿಲ್ಲಾಧಿಕಾರಿ ಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಗಳು ಹಾಗೂ ಇನ್ನಿತರ ಸಂಭಂದ ಪಟ್ಟ ಅಧಿಕಾರಿಗಳಿಗೆ  ಮನವಿ ಸಲ್ಲಿಸಲಾಗಿದೆ ಎಂದು ದಯಾನಂದ ಸ್ವಾಮೀಜಿಯವರು ತಿಳಿಸಿದರು. ಇಂದಿನಿಂದ ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆ: ಜನತೆಯಲ್ಲಿ ಜಾಗೃತಿ ಮೂಡಿಸಲು ಇಂದಿನಿಂದ ಜಾತ್ರೆ ಮುಗಿಯುವ ವರೆಗೆ ಜಿಲ್ಲೆಯ ಕುಷ್ಟಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ದುರ್ಗಾ ದೇವಿ ಜಾತ್ರಾ ಪರಿಸರ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ  ಸ್ವಾಮೀಜಿಯವರು ಅಹಿಂಸಾ-ಪ್ರಾಣಿದಯಾ-ಆದ್ಯಾತ್ಮ ಸಂದೇಶಯಾತ್ರೆಯನ್ನು  ಕೈಗೊಳ್ಳುವುದಾಗಿ  ತಿಳಿಸಿದರು.