ಲೋಕದರ್ಶನ ವರದಿ
ಸಮುದಾಯ ಭವನಗಳ ಬಾಡಿಗೆ ನಿಯಂತ್ರಣ ಸಮಿತಿ ರಚಿಸಲು ಆಗ್ರಹ-ಇಮ್ತಿಯಾಜ ಮಾನ್ವಿ
ಗದಗ-20, ರಾಜ್ಯ ಸರ್ಕಾರದ ಸೊಚನೆಯಂತೆ ಹಾಗೂ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸುತ್ತೋಲೆ ದಿ. 12-06-2018 ರ ಪ್ರಕಾರ ಸರ್ಕಾರದಿಂದ ಅನುದಾನ ಪಡೆದು ನಿರ್ಮಿಸಲಾಗಿರುವ ಶಾದಿ ಮಹಲ, ಸಮುದಾಯ ಭವನಗಳು ಬಡ ಅಲ್ಪಸಂಖ್ಯಾತರ ಕುಟುಂಬಗಳ ಮದುವೆ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಕೈಗೆಟ್ಟುವ ದರದಲ್ಲಿ ಸಿಗುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬಾಡಿಗೆ ನಿಯಂತ್ರಣ ಸಮಿತಿಯನ್ನು ರಚನೆ ಮಾಡಬೇಕೆಂದು ಗದಗ ಜಿಲ್ಲಾ ಅಲ್ಪಸಂಖ್ಯಾತರ ಹೋರಾಟ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಆಗ್ರಹಿಸಿದ್ದಾರೆ.
ನಗರದಲ್ಲಿ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅಲ್ಪಸಂಖ್ಯಾತರ ಸಾಮಾಜಿಕ ಭದ್ರತೆಗಾಗಿ ಹಾಗೂ ವಿಶೇಷವಾಗಿ ಶೈಕ್ಷಣಿಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಇದರ ಅನುಷ್ಠಾನಕ್ಕಾಗಿ ಕೊಟ್ಯಾಂತರ ಅನುದಾನ ನೀಡಲಾಗುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮ ಮತ್ತು ವಕ್ಫ್ ಬೋರ್ಡ ಮೂಲಕ ಅಲ್ಪಸಂಖ್ಯಾತರ ಅಭಿವೃಧ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಲ್ಪಸಂಖ್ಯಾತರ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ, ರಾಜ್ಯದಲ್ಲಿ ವಾಸಿಸುತ್ತಿರುವ ಬಡ ಅಲ್ಪಸಂಖ್ಯಾತರ ಸಮುದಾಯದ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮುಖಾಂತರ ಕೊಟ್ಯಾಂತರ ಅನುದಾನ ನೀಡಿ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ, ಆದರೆ ಖಾಸಗಿ ಸಂಸ್ಥೆಗಳು ಬಡವರ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಕಡಿಮೆ ಬಾಡಿಗೆಯನ್ನು ನೀಡದೇ 30 ರಿಂದ 40 ಸಾವಿರ ಬಾಡಿಗೆಯನ್ನು ಪಡೆಯುವ ಮೂಲಕ ಸರ್ಕಾರದ ಆದೇಶವನ್ನು ಗಾಳಿ ತೂರಿದ್ದಾರೆ. ಸಮುದಾಯ ಭವನಗಳನ್ನು ನಿರ್ಮಿಸಲು ಅಲ್ಪಸಂಖ್ಯಾತರ ಹೆಸರಲ್ಲಿ ಅನುದಾನ ಪಡೆದುಕೊಳ್ಳುತ್ತಿರುವ ಖಾಸಗಿ ಸಂಸ್ಥೆಯವರು ಭವನಗಳ ನಿರ್ಮಾಣದ ನಂತರ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ತಮ್ಮಗೆ ಮನಬಂದಂತೆ ಸಾವಿರಾರು ರೂಪಾಯಿಗಳನ್ನು ಬಡವರಿಂದ ವಸೂಲಿ ಮಾಡುತ್ತಿದ್ದಾರೆ.
ಸಮಿತಿ ಉಪಾಧ್ಯಕ್ಷ ಅಬ್ದುಲಕರೀಮ ಬಳಗಾನೂರ ಮಾತನಾಡಿ ಅಲ್ಪಸಂಖ್ಯಾತರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃಧ್ದಿ ಕಾಣಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಬಿವೃಧ್ದಿ ನಿಗಮದಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗದಗ ಜಿಲ್ಲೆಯ ಹಾಗೂ ಗದಗ-ಬೆಟಗೇರಿ ನಗರದಲ್ಲಿ ಸಾವಿರಾರು ಬಡ ಕುಟುಂಬಗಳು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ, ಅಧಿಕಾರಿಗಳು ಕೊಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾಗೊಳಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಮಿತಿಯ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದೆಂದು ಹೇಳಿದರು. ಅಲ್ಪಸಂಖ್ಯಾತರ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲಕರೀಮ ಬಳಗಾನೂರ, ಕಾರ್ಯದರ್ಶಿ ಇಬ್ರಾಹಿಂ ಹಳ್ಳಿಕೇರಿ, ಸಮಿತಿ ಮುಖಂಡರಾದ ಮಹ್ಮದರಫೀಕ ಮದ್ಲಿವಾಲೆ, ಮೆಹಬೂಬಸಾಬ ಬಳ್ಳಾರಿ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಬಾಬುಸಾಬ ಅಗಡಿ, ಖಾಜಾಸಾಬ ಇಸ್ಮಾಯಿಲನವರ, ಮಕ್ತುಮಸಾಬ ಮುಲ್ಲಾನವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.