ಬೆಳೆವಿಮೆ ನೋಂದಣಿಯಲ್ಲಿ ರೈತರಿಗೆ ತೊಂದರೆ ನೀಡದಂತೆ ಒತ್ತಾಯ

 ಬೆಳೆವಿಮೆ ನೋಂದಣಿಯಲ್ಲಿ ರೈತರಿಗೆ ತೊಂದರೆ ನೀಡದಂತೆ ಒತ್ತಾಯ Demand to ensure farmers face no difficulties during crop insurance registration

  ರಾಣೆಬೆನ್ನೂರು, ಜು16: ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶದ ನೆಪದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಬೆಳೆವಿಮೆ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಬ್ಯಾಂಕ್ ಅಧಿಕಾರಿಗಳು ರೈತರಿಗೆ ಅನಗತ್ಯ ತೊಂದರೆ ನೀಡದೇ ಸಹಕಾರ ನೀಡುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮುಖಂಡರು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.  

ನಗರದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಅವರಿಗೆ ಮನವಿ ಸಲ್ಲಿಸಿದ ಸಂಘಟನೆಗಳ ರಾಜ್ಯ ಕಾರ್ಯದರ್ಶಿ ರವೀಂದ್ರಗೌಡ ಎಫ್‌. ಪಾಟೀಲ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ  ಹಾಗೂ ಪುನರ್‌ರಚಿತ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಅಡಿಯಲ್ಲಿ ರೈತರು ಬೆಳೆವಿಮೆ ಮಾಡಿಸಿಕೊಳ್ಳಲು ಬ್ಯಾಂಕ್‌ಗಳಲ್ಲಿ ಅನಗತ್ಯ ವಿಳಂಬ ಹಾಗೂ ತೊಂದರೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.  

ರಾಜ್ಯದಲ್ಲಿ ಮಳೆ ಕೊರತೆಯಿಂದ ಬರದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳ ಅಸಹಕಾರ ರೈತರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಬೆಳೆವಿಮೆ ಪ್ರೀಮಿಯಂ ಪಾವತಿಗೆ ನಿಗದಿತ ಅವಧಿಯೂ ಸಮೀಪಿಸುತ್ತಿರುವುದರಿಂದ ರೈತರಿಗೆ ತಕ್ಷಣವೇ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.  

ಸಾಲ ಪಡೆಯದ  ರೈತರಿಂದ ಹೆಚ್ಚುವರಿ ದಾಖಲೆಗಳು ಹಾಗೂ ಸ್ವಯಂ ಘೋಷಣಾ ಪತ್ರಗಳನ್ನು ಕಡ್ಡಾಯವಾಗಿ ಪಡೆಯುತ್ತಿರುವ ಕ್ರಮವನ್ನು ಕೈಬಿಡಬೇಕು. ಬೆಳೆವಿಮೆ ಯೋಜನೆಯ ಉದ್ದೇಶಕ್ಕೆ ವಿರುದ್ಧವಾಗಿರುವ ಈ ಪ್ರಕ್ರಿಯೆಯಿಂದ ಅನೇಕ ರೈತರು ಯೋಜನೆಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.  ಬ್ಯಾಂಕ್ ಸಿಬ್ಬಂದಿ ರೈತರೊಂದಿಗೆ ಮಾನವೀಯವಾಗಿ ವರ್ತಿಸಿ, ಯಾವುದೇ ಅನಗತ್ಯ ನಿಯಮಗಳನ್ನು ಹೇರಿ ಬೆಳೆವಿಮೆ ನೋಂದಣಿಗೆ ಅಡ್ಡಿಯಾಗಬಾರದು. ಅರ್ಹ ರೈತರೆಲ್ಲರಿಗೂ ಯೋಜನೆಯ ಲಾಭ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿಗೆ ಸ್ಪಂದಿಸದಿದ್ದಲ್ಲಿ ಸಂಬಂಧಿತ ಬ್ಯಾಂಕ್‌ಗಳ ಎದುರು ರೈತ ಸಂಘಟನೆಗಳು ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.