ರಾಯಬಾಗ 02: ತಾಲೂಕಿನಲ್ಲಿ ಸಂಚರಿಸುವ ಬಸ್ ಗಳನ್ನು ಸರಿಯಾದ ಸಮಯದಲ್ಲಿ ಓಡಿಸಬೇಕು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ಬಸ್ ಗಳನ್ನು ಓಡಿಸಬೇಕೆಂದು ಆಗ್ರಹಿಸಿ ಗುರುವಾರ ಗ್ರೇಡ್2 ತಹಶೀಲ್ದಾರ ಪರಮಾನಂದ ಮಂಗಸೂಳಿ ಅವರ ಮೂಲಕ ವಾ.ಕ.ರಾ.ರ.ಸಾ.ಸಂ. ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕರ್ನಾಟಕ ಯುವರಕ್ಷಣಾ ವೇದಿಕೆ ರಾಯಬಾಗ ತಾಲೂಕಾ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಬೆಳ್ಳಗ್ಗೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಗಳನ್ನು ತಡೆದು ಪ್ರತಿಭಟನೆಯನ್ನು ನಡೆಸಿದ ಕ.ಯು.ರ.ವೇದಿಕೆ ಸದಸ್ಯರು, ರಾಯಬಾಗ ಬಸ್ ಡಿಪೋದಿಂದ ಸರಿಯಾದ ವೇಳೆಯಲ್ಲಿ ಬಸ್ ಸಂಚಾರ ಇಲ್ಲದೇ ಇರುವುದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ನೌಕರರಿಗೆ ದಿನನಿತ್ಯ ತೊಂದರೆ ಆಗುತ್ತಿದೆ ಎಂದು ಆರೋಪಿಸಿದರು.
ಸಾರಿಗೆ ಸಂಸ್ಥೆಯವರು ರಾಯಬಾಗ ತಾಲೂಕಿನ ವಿವಿಧ ಗ್ರಾಮಗಳಿಗೆ ಶಾಲಾ ವಿದ್ಯಾರ್ಥಿಗಳಿಗೋಸ್ಕರ್ ಹೆಚ್ಚಿನ ಬಸ್ ಓಡಿಸಬೇಕು, ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾರ್ಥಿನಿಯರಿಗೆ ಕಿಡಿಗೇಡಿಗಳಿಂದ ಆಗುತ್ತಿರುವ ಕಿರುಕುಳ ಮತ್ತು ರಾತ್ರಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ತಪ್ಪಿಸಲು ಸಿ.ಸಿ.ಕ್ಯಾಮೆರಾ ಅಳವಡಿಸಬೇಕು, ಸಮಯಕ್ಕೆ ಸರಿಯಾಗಿ ಬಸ್ ಗಳನ್ನು ಓಡಿಸಬೇಕೆಂದು ಆಗ್ರಹಿಸಿದರು.
ಡಿಪೋ ವ್ಯವಸ್ಥಾಪಕ ಜಿ.ಐ.ಬಸವಂತಪೂರ, ಪಿ.ಎಸ್.ಐ ಶಿವಶಂಕರ ಮುಕರಿ, ಕ.ಯು.ರ.ವೇದಿಕೆ ತಾಲೂಕಾಧ್ಯಕ್ಷ ಗಜಾನನ ಮಾಳಿ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಅಮರೇಶ ತಾಳಿಕೋಟಿ, ರಾಜು ಹೊಸಟ್ಟಿ, ಈಶ್ವರ ಮಾಳಿ, ಲೋಕೇಶ ಮೇತ್ರಿ, ಸಚೀನ ಮೇತ್ರಿ, ಬಾಬು ಹೊಸಟ್ಟಿ, ಪಿಂಟು ಜಾನವಾಡೆ, ನೀತಿನ ಕುಸ್ತಿಗಾರ, ಗಜಾನನ ಮೇತ್ರಿ, ಸಾಗರ ಕುಲಗುಡೆ, ಸುನೀಲ ಮೇತ್ರಿ, ಸುಮೀತ ಕುಂಬಾರ, ಸಂದೀಪ ಕುಲಗುಡೆ ಸೇರಿ ಅನೇಕರು ಇದ್ದರು.