ಬೆಂಗಳೂರು, ಏ.5,ಬೆಂಗಳೂರಿನಲ್ಲಿರುವ ಸ್ಥಳೀಯ ದಿನಸಿ ಅಂಗಡಿಗಳಲ್ಲಿ ಇದುವರೆಗೂ ದೊರಕುತ್ತಿರುವ ದಿನಸಿ ವಸ್ತುಗಳು ಮುಗಿಯುತ್ತಾ ಬಂದಿದ್ದು , ಇನ್ನೆರಡು ದಿವಸಗಳಲ್ಲಿ ಈ ಎಲ್ಲ ವಸ್ತುಗಳಿಗೆ ಅಭಾವ ತಲೆದೋರಲಿವೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರು ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ವ್ಯಾಪಾರಸ್ಥರ ಬಳಿ ಮಾತನಾಡಿಸಿದಾಗ ಈ ಅಂಶವು ಬೆಳಕಿಗೆ ಬಂದಿದೆ. ಎರಡು ದಿನಗಳಿಗಾಗುವಷ್ಟು ದಿನಸಿಗಳು ಮಾತ್ರ ನಮ್ಮಲ್ಲಿ ಲಭ್ಯವಿದ್ದು ಮುಂದಿನ ದಿನಗಳಲ್ಲಿ ದಿನಸಿ ವಸ್ತುಗಳ ಅಭಾವವಾಗುವ ಸಂಭವವಿದೆ ಎಂದು ತಮ್ಮ ಆತಂಕವನ್ನು ವ್ಯಾಪಾರಸ್ಥರು ವ್ಯಕ್ತಪಡಿಸಿದ್ದಾರೆ.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಕಷ್ಟು ದಿನಕ್ಕಾಗುವಷ್ಟು ದಿನಸಿಗಳು ಲಭ್ಯವಿದ್ದರೂ ಅಲ್ಲಿಂದ ನಗರದ ಸ್ಥಳೀಯ ಪ್ರದೇಶದ ಅಂಗಡಿಗಳಿಗೆ ತಲುಪಿಸುವ ವ್ಯವಸ್ಥೆಯು ತುಂಡಾಗಿರುವುದು ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ. ಪ್ರತಿ ದಿವಸವೂ ಸ್ಥಳೀಯ ಅಂಗಡಿಗಳಿಗೆ ಹಾಗೂ ಎಪಿಎಂಸಿ ಮಾರುಕಟ್ಟೆಗಳಿಗೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರುಗಳು ಏಕಾಏಕಿ ಲಾಕ್ ಡೌನ್ ನಿಂದಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದಿದ್ದಾರೆ.ಈ ಕೂಲಿ ಕಾರ್ಮಿಕರು ಗಳ ದಿನನಿತ್ಯದ ಕಷ್ಟ ಸುಖಗಳನ್ನು ಸರ್ಕಾರದ ಯಾವುದೇ ಅಧಿಕಾರಿಗಳು ಅಥವಾ ಶಾಸಕ- ಮಂತ್ರಿ ಮಹೋದಯರು ಇದುವರೆಗೂ ಕೇಳಿಲ್ಲ. ದೈನಂದಿನ ಕೂಲಿ ಮಾಡಿಕೊಂಡು ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದ ಈ ಅಸಂಘಟಿತ ಕೂಲಿ ಕಾರ್ಮಿಕರುಗಳು ಇಂದು ತಮ್ಮ ದೈನಂದಿನ ಕಾರ್ಯ ನಿರ್ವಹಣೆಯನ್ನು ಮಾಡಲು ಮನಸ್ಸನ್ನು ತೋರುತ್ತಿಲ್ಲ.ಇದರಿಂದಾಗಿ ಎಪಿಎಂಸಿ ಮಾರುಕಟ್ಟೆಯಿಂದ ಸ್ಥಳೀಯ ಅಂಗಡಿಗಳಿಗೆ ತಲುಪಿಸುವ ಸಂಪರ್ಕ ಕೊಂಡಿ ಸಂಪೂರ್ಣ ಕಳಚಿದಂತಾಗಿದೆ. ಇದರಿಂದಾಗಿ ಇನ್ನೆರಡು ದಿವಸಗಳಲ್ಲಿ ದಿನಸಿ ವಸ್ತುಗಳ ಕೃತಕ ಅಭಾವ ಸೃಷ್ಟಿಯಾಗಿ ಬೆಂಗಳೂರಿನ ನಾಗರಿಕರು ಹಾಹಾಕಾರವನ್ನು ಅನುಭವಿಸುವ ಸಂಭವ ಅತಿ ಹೆಚ್ಚಾಗಿದೆ. ಆದುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಾರ್ಮಿಕ ಮಂತ್ರಿಗಳು, ಅಧಿಕಾರಿಗಳು ಈ ಕೂಡಲೇ ಈ ಕೂಲಿ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸಿ ಅವರು ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಮೂಲಕ ಬೆಂಗಳೂರಿನ ಪ್ರತಿಯೊಂದು ಪ್ರದೇಶಗಳಲ್ಲಿಯೂ ದಿನಸಿ ವಸ್ತುಗಳು ಸುಲಲಿತವಾಗಿ ದೊರಕುವಂತೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.