ಪ್ರಮೋದ್ ಮಧ್ವರಾಜ್ ವಿರುದ್ಧದ ಸುಮೋಟೋ ಪ್ರಕರಣವನ್ನು ಹಿಂಪಡೆಯಲು ನಿರ್ದೇಶನ ನೀಡಲು ಆಗ್ರಹ
ವಿಜಯಪುರ 27: ಮಾಜಿ ಸಚಿವರು ಹಾಗೂ ಕರ್ನಾಟಕ ರಾಜ್ಯದ ಮೀನುಗಾರ ಸಮಾಜದ ಅದ್ವಿತೀಯ ನಾಯಕರಾದ ಶ್ರೀ ಪ್ರಮೋದ್ ಮಧ್ವರಾಜ್ ರವರ ವಿರುದ್ಧದ ಸುಮೋಟೋ ಪ್ರಕರಣವನ್ನು ಹಿಂಪಡೆಯಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಅಂಬಿಗರ ಚೌಡಯ್ಯ ಧಾರ್ಮಿಕ ಸೇವಾ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿಗಳು ವಿಜಯಪುರ ಅವರಿಗೆ ಮನವಿ ಸಲ್ಲಿಸಿದರು.
ಸಾಹೇಬಗೌಡ ಎನ್. ಬಿರಾದಾರ ಮಾತನಾಡಿ, ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಕಳೆದ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಮೋದ್ ಮಧ್ವರಾಜರವರು ಪ್ರಚೋದನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಿ ಉಡುಪಿ ಜಿಲ್ಲಾ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರನ್ನು ಹಿಡಿದು ಕೊಟ್ಟಂತಹ ಮೀನುಗಾರ ಮಹಿಳೆಯರ ಮೇಲೆ ಕೇಸು ಹಾಕಿ ಬಂಧಿಸಿರುವ ಮೀನುಗಾರ ಮಹಿಳೆಯರ ಪರ ನಡೆದ ಸಮಾಲೋಚನಾ ಸಭೆಯಲ್ಲಿ ನ್ಯಾಯಸಮ್ಮತ ತೀರ್ಮಾನಕ್ಕೆ ಆಗ್ರಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಫ್‌ಐಆರ್ ದಾಖಲಿಸಿರುವ ಕ್ರಮವನ್ನು ಹಾಗೂ ಈ ರೀತಿಯ ಸಂವಿಧಾನ ವಿರೋಧಿ ನಡೆಯನ್ನು ಸಮಸ್ತ ಅಂಬಿಗ, ಕೋಳಿ, ಕಬ್ಬಲಿಗ, ಮೋಗವೀರ, ಬೆತ್ತ, ಮೀನುಗಾರ ಸಮಾಜವು ತೀವ್ರವಾಗಿ ಖಂಡಿಸುತ್ತದೆ ಎಂದರು.
ಉಪಾಧ್ಯಕ್ಷ ಭರತ ಎಸ್. ಕೋಳಿ ಮಾತನಾಡಿ, ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರ ಮೇಲೆ ಕೇಸು ದಾಖಲೆ ಮಾಡದೇ ಕಳ್ಳರನ್ನು ಹಿಡಿದು ಕೊಟ್ಟಂತಹ ಮೀನುಗಾರ ಮಹಿಳೆಯರ ಮೇಲೆ ಕೇಸು ದಾಖಲೆ ಮಾಡಿದ್ದೂ ಎಷ್ಟು ಸರಿ? ಎಂದು ಕೇಳಿದನ್ನು ಪ್ರಚೋದನೆ ಮಾಡಿದರು ಎಂಬ ಹಿನ್ನೆಲೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಿರುವುದು ತೀರಾ ಹಾಸ್ಯಾಸ್ಪದವೆನಿಸಿದೆ.
ಈ ಪ್ರಕರಣ ಕೇವಲ ಸಾಮಾನ್ಯ ಮೀನುಗಾರ ಮಹಿಳೆಯರ ವಿರುದ್ಧ ಕೇಸು ದಾಖಲಿಸಿದಲ್ಲದೆ ಅದನ್ನು ಪ್ರಶ್ನಿಸಿದ ಮೀನುಗಾರರ ರಾಜ್ಯ ಮಟ್ಟದ ನಾಯಕನ ಮೇಲೆ ಕೇಸು ದಾಖಲಿಸಿದ್ದು ಸಮಸ್ತ ಸಮುದಾಯವನ್ನು ಹತ್ತಿಕ್ಕು ಕಾರ್ಯವಾದಂತಾಗಿದೆ. ಹಾಗಾಗಿ ನಮ್ಮ ಹಕ್ಕುಗಳು ಮತ್ತು ನಮ್ಮ ನಾಯಕರ ಸಮಗ್ರತೆಯನ್ನು ರಕ್ಷಿಸಲು ನಾವು ಮುಂದಿನ ದಿನಗಳಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ಪ್ರಕರಣದಲ್ಲಿ ನಮ್ಮ ಸಮಾಜದ ಮೇರು ವ್ಯಕ್ತಿತ್ವ ಹೊಂದಿರುವ ಪ್ರಮೋದ್ ಮಧ್ವರಾಜ ರವರ ಮೇಲೆ ಹಾಕಿರುವ ಕೇಸನ್ನು ವಾಪಸ ತೆಗೆದುಕೊಳ್ಳುವಂತೆ ಕರ್ನಾಟಕ ಸರ್ಕಾರ ಹಾಗೂ ಗೃಹ ಇಲಾಖೆಗೆ ನಿಮ್ಮ ಮುಖಾಂತರ ನಿರ್ದೇಶನ ನೀಡಲು ನಮ್ಮ ಜಿಲ್ಲೆಯ ಸಮಸ್ತ ಅಂಬಿಗ, ಕೋಳಿ, ಕಬ್ಬಲಿಗ, ಮೋಗವೀರ, ಬೆತ್ತ, ಮೀನುಗಾರ ಸಮಾಜ ಹಾಗೂ ಸತ್ಯವತಿ ಮಹಿಳಾ ಮೀನುಗಾರರ ಸಂಘ ಆಗ್ರಹಿಸುತ್ತವೆ. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ರಾಜ್ಯಾದ್ಯಾಂತ ಹಮ್ಮಿಕೊಳ್ಳಲಾಗುವುದು ಎಂದರು.
ಶಿವಾನಂದ ಅಂಬಿಗೇರ, ಹಣಮಂತ ನಾಯ್ಕೋಡಿ, ಪ್ರವೀಣ ನಾಟಿಕಾರ, ಸಂಗಪ್ಪ ದನ್ಯಾಳ, ಮೀನುಗಾರರ ಸಂಘದ ಅಧ್ಯಕ್ಷ ದಾನಮ್ಮ ಕೋಳಿ, ಶೃತಿ ಗುಲಬರ್ಗಾ, ಎಸ್.ಟಿ. ಮಣೂರ, ಅಶೋಕ ಪಿರಾಪುರ, ಪರಶುರಾಮ ತಳವಾರ, ನಿಂಗಪ್ಪಾ ಧನ್ಯಾಳ, ಪ್ರವೀಣ ಗಣಿ, ಬಲಭೀಮ ನಾಯ್ಕೋಡಿ, ಬಾಬು ಅಸ್ಕಿ, ಅಪ್ಪು ಕಲಕೇರಿ, ಆನಂದ ಬಸರಕೋಡ, ರವಿ ಅದಟ್ರಾವ್, ಭಾರತಿ ಬಳಗಾನೂರ, ಗೀತಾ ಪಾಟೀಲ, ಸಾವಿತ್ರಿ ಗೌಂಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.