ಲೋಕದರ್ಶನ ವರದಿ
ಫಸಲ್ ಭೀಮಾ ಯೋಜನೆಯಲ್ಲಿ ನಷ್ಟಗೊಂಡ ರೈತರ ಪರಿಹಾರಕ್ಕೆ ಆಗ್ರಹ
ವಿಜಯಪುರ : 2024-25 ನೇ ಸಾಲಿನ ಮುಂಗಾರು ಹಾಗೂ ಹಿಂಗಾರೂ ಹಂಗಾಮಿನಲ್ಲಿ ರೈತರಿಗೆ ಅತೀವೃಷ್ಠಿ ಹಾಗೂ ಕಳಪೆ ತೊಗರಿ ಬೀಜ ವಿತರಣೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗಿದ್ದು, ಜಿಲ್ಲೆಯ ಎಲ್ಲಾ ವಿಮೆ ತುಂಬಿದ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ, ಜಂಟಿ ಕೃಷಿ ನಿರ್ದೇಶಕರಿಗೆ ಹಾಗೂ ವಿಮಾ ಕಂಪನಿಯ ವ್ಯವಸ್ಥಾಪಕರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧುವಾರದಂದು ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡುತ್ತಾ ಫಸಲಭೀಮಾ ಯೋಜನೆಯಲ್ಲಿ ಸಾಕಷ್ಟು ಗೊಂದಲಮಯವಾದ ನಿಯಮಗಳಿವೆ, ಕಳೆದ 7 ವರ್ಷಗಳ ಇಳುವರಿಯ ಆಧಾರದ ಮೇಲೆ ನಷ್ಟ ಪರಿಹಾರ ಕಂಡುಕೊಳ್ಳುವುದು ಅವೈಜ್ಞಾನಿಕವಾದ ನೀತಿಯಾಗಿದೆ, ಇದನ್ನು ಸರಳಿಕರಣಗೊಳಿಸಬೇಕು ಹಾಗೂ ರೈತರಿಗೆ ಇದರ ಕುರಿತು ಸಂಪೂರ್ಣ ಮಾಹಿತಿ ನೀಡಿ ಕನ್ನಡದಲ್ಲಿ ಕಿರು ಪುಸ್ತಕ ಹೊರತಂದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ಮಾಡಿ ಮಾಹಿತಿ ನೀಡಬೇಕು ಎಂದರು.
ಈ ವೇಳೆ ದೇವರಹಿಪ್ಪರಗಿ ತಾಲೂಕಾ ಅಧ್ಯಕ್ಷರಾದ ಈರ್ಪ ಕುಳೆಕುಮಟಗಿ, ಗೌರವಾಧ್ಯಕ್ಷರಾದ ಶಿವಾನಂದಯ್ಯ ಹಿರೇಮಠ ಮುಖಂಡರಾದ ರಾಜಶೇಖರ ಛಾಯಾಗೋಳ ಮಾತನಾಡಿ ಈಗ ಕೆಲವರಿಗೆ ಮಾತ್ರ ವಿಮೆ ಹಣ ಜಮಾ ಆಗುತ್ತಿವೆ, ಅದು ಯಾವ ಮಾನದಂಡದ ಮೇಲೆ ಆಗುತ್ತಿದೆ, ಹೊಲದ ಜಿ.ಪಿ.ಎಸ್ ಮಾಡಲು ಯಾರು ಬಂದರು, ಇಲ್ಲಿ ಮಧ್ಯವರ್ತಿಗಳು ಲಂಚಪಡೆದು ವಿಮೆ ಹಾಕಿಸಿದ್ದಾರೆ ಎಂದು ಆರೋಪ ಕೇಳಿ ಬರುತ್ತಿವೆ, ಹಾಗಾಗಬಾರದು, ಯಾವ ರೈತರು ನಿಜವಾಗಿ ನಷ್ಟಗೊಂಡಿದ್ದಾರೆ ಅಂತವರಿಗೆ ತಪ್ಪದೇ ವಿಮೆ ಹಣ ಜಮಾ ಮಾಡಬೇಕು ಎಂದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಸಂಗಪ್ಪಗೌಡ ಬಿರಾದಾರ, ಶರಣಯ್ಯ ಮೇಲಿನಮಠ, ಮಲ್ಲಪ್ಪ ಹುಣಸಗಿ, ಮಹಾಂತಪ್ಪ ಸುಂಬಡ, ಶಿವಪ್ಪ ತಾಳಿಕೋಟಿ, ಮಲ್ಲಪ್ಪ ಹುಣಸಗಿ,ಶಾಂತು ಕೆಮಶೆಟ್ಟಿ, ಸಾಯಿಪ್ರಸಾದ ಹೂಗಾರ, ತುಳಜಾರಾಮ ಜಾಧವ, ಬಸ್ಸು ಸುಂಬಡ, ಚಿದಾನಂದ ಮುಡಗಾರ, ಅಪ್ಪಗೌಡ ಬಿರಾದಾರ, ನಾನಾಗೌರ ಬೋರಾವತ್ತ ಸೇರಿದಂತೆ ಇದ್ದರು.