ನವದೆಹಲಿ 7: ರೈತರಿಗೆ ದೀರ್ಘಾವಧಿವರೆಗೆ ಅಗ್ಗದ ಕೃಷಿ ಸಾಲ ಸೌಲಭ್ಯ ಕಲ್ಪಿಸಬೇಕು. ಜಿಎಸ್‌ಟಿ ದರ ಕಡಿಮೆಗೊಳಿಸಬೇಕು. ಜೊತೆಗೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡುತ್ತಿರುವ ಹಣವನ್ನು ದ್ವಿಗುಣಗೊಳಿಸಬೇಕು ಎಂದು ರೈತ ಸಂಘಟನೆಗಳು, ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಮಂಡಿಸಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ರೈತ ಸಂಘಟನೆಗಳು ಮತ್ತು ಕೃಷಿ ಅರ್ಥಶಾಸ್ತ್ರಜ್ಞರ ಜೊತೆಗೆ ಬಜೆಟ್ ಪೂರ್ವ ಸಮಾಲೋಚನೆ ನಡೆಯಿತು. ಎರಡು ಗಂಟೆ ನಡೆದ ಸಭೆಯಲ್ಲಿ ದೇಶದ ಕೃಷಿ ವಲಯವು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಸಂಘಟನೆಗಳ ಮುಖಂಡರು ಸರ್ಕಾರದ ಗಮನ ಸೆಳೆದರು.
ಕೃಷಿ ವಲಯಕ್ಕೆ ಹೆಚ್ಚಿನ ಹಣಕಾಸಿನ ನೆರವು, ಮಾರುಕಟ್ಟೆ ಸುಧಾರಣೆ ಹಾಗೂ ಹೊಸ ಹೂಡಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕು ಎಂದು ಬೇಡಿಕೆ ಮುಂದಿಟ್ಟರು.
ಭಾರತ ಕೃಷಿಕ ಸಮಾಜದ ಅಧ್ಯಕ್ಷ ಅಜಯ್ ವೀರ್ ಜಖರ್ ಮಾತನಾಡಿ, ‘ಕೃಷಿ ಉತ್ಪಾದಕತೆ ಹೆಚ್ಚಳ ಹಾಗೂ ಅನ್ನದಾತರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ’ ಎಂದು ಒತ್ತಾಯಿಸಿದರು.
ಕೃಷಿ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಬೇಕು. ಶೇ 1ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು. ಪ್ರಸ್ತುತ ಪಿಎಂ–ಕಿಸಾನ್ ನಿಧಿಯಡಿ ವಾರ್ಷಿಕ ₹6
ಸಾವಿರ ನೀಡಲಾಗುತ್ತಿದೆ. ಇದನ್ನು ರೂ.12
ಸಾವಿರಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕಡಲೆ, ಸೋಯಾಬಿನ್ ಮತ್ತು ಸಾಸಿವೆ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಬೇಕಿದೆ. ಇದಕ್ಕಾಗಿ ಮುಂದಿನ ಎಂಟು ವರ್ಷಗಳವರೆಗೆ ವಾರ್ಷಿಕ ರೂ.1
ಸಾವಿರ ಕೋಟಿ ನೀಡಬೇಕು. ಇದರಿಂದ ಈ ಕೃಷಿ ಹುಟ್ಟುವಳಿಗಳ ಇಳುವರಿ ಹೆಚ್ಚಲಿದ್ದು, ಆಮದು ಅವಲಂಬನೆ ತಗ್ಗಲಿದೆ. ದೇಶದ ಆಹಾರ ಭದ್ರತೆಗೆ ಸಹಕಾರಿಯಾಗಲಿದೆ ಎಂದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸಣ್ಣ ರೈತರಿಗೆ ಅನುಕೂಲ ಕಲ್ಪಿಸಲು ಶೂನ್ಯ ದರದಲ್ಲಿ ಬೆಳೆ ವಿಮಾ ಸೌಲಭ್ಯ ಒದಗಸಬೇಕು. ಕೃಷಿ ಉಪಕರಣಗಳು, ರಸಗೊಬ್ಬರ, ಬಿತ್ತನೆಬೀಜ ಮತ್ತು ಔಷಧಗಳ ಮೇಲೆ ಜಿಎಸ್‌ಟಿ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಪಿಎಚ್‌ಡಿ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಆರ್.ಜಿ. ಅಗರ್ವಾಲ್ ಮಾತನಾಡಿ ಪ್ರಸ್ತುತ ಕೀಟನಾಶಕಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ಶೇ 5ಕ್ಕೆ ತಗ್ಗಿಸಬೇಕು ಎಂದು ಕೋರಿದರು. ದೇಶದಲ್ಲಿ ಕೀಟನಾಶಕಗಳ ಕಳ್ಳಸಾಗಣೆಯು ಹೆಚ್ಚಿದೆ. ನಕಲಿ ಕೀಟನಾಶಕಗಳ ಮಾರಾಟದ ಹಾವಳಿ ಉಲ್ಬಣಿಸಿದೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ಧರ್ಮೇಂದ್ರ ಮಲಿಕ್ ಮಾತನಾಡಿ ‘ಭೂಮಿಯ ವೆಚ್ಚ ಕೂಲಿ ಕೊಯ್ಲೋತ್ತರ ವೆಚ್ಚ ಆಧರಿಸಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯನ್ನು ಪರಿಷ್ಕರಿಸಬೇಕಿದೆ’ ಎಂದು ಕೋರಿದರು. ಕಂಪನಿಗಳು ವೆಬ್‌ಸೈಟ್‌ಗಳಲ್ಲಿ ಕೃಷಿ ಉಪಕರಣಗಳ ಬೆಲೆ ಪ್ರಕಟಿಸಬೇಕು. ಕೃಷಿ ಮಾರುಕಟ್ಟೆಗಳ ಮೂಲಸೌಕರ್ಯವನ್ನು ಉತ್ತಮಪಡಿಸಬೇಕು. ಎಲ್ಲಾ ಬೆಳೆಗಳಿಗೂ ಎಂಎಸ್‌ಪಿ ಸೌಲಭ್ಯ ವಿಸ್ತರಿಸಬೇಕು. ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳ ಆಮದಿಗೆ ಅವಕಾಶ ನೀಡಬಾರದು. ತುರ್ತು ಸಂದರ್ಭದಲ್ಲಷ್ಟೇ ಕನಿಷ್ಠ ರಫ್ತು ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.