ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ

Demand completion of the Krishna Upland Project


ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ  

ವಿಜಯಪುರ 09: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ವಿಜಯಪುರ ಮತ್ತು ಬಾಗಲಕೋಟೆ ಉಭಯ ಜಿಲ್ಲೆಗಳ ಶಾಸಕರು ಹಾಗೂ ಸಂಸದರು ಪಕ್ಷಾತೀತವಾಗಿ ಸರಕಾರದ ಗಮನ ಸೆಳೆಯುತ್ತೇವೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ. 

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ಸಂತ್ರಸ್ತರ ಹೋರಾಟ ಸಮಿತಿ ಬಾಗಲಕೋಟೆಯಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ, ಸರದಿ ಸತ್ಯಾಗ್ರಹದಲ್ಲಿ ಇಂದು ಸೋಮವಾರ ಪಾಲ್ಗೊಂಡು ಬೆಂಬಲ ಸೂಚಿಸಿ ಅವರು ಮಾತನಾಡಿದರು. 

ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್ ಎತ್ತರ ಮಾಡುವುದರಿಂದ ಈ ಯೋಜನೆ ಪೂರ್ಣಗೊಂಡರೆ ಉಭಯ ಜಿಲ್ಲೆಗಳಷ್ಟೇ ಅಲ್ಲ, ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೂ ಅನುಕೂಲವಾಗಲಿದೆ.  16 ಲಕ್ಷ ಹೆಕ್ಟೆರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.  ಇದರಿಂದ ರೈತರ ಬಾಳು ಹಸನಾಗಲಿದೆ.  ಎರಡೂ ಜಿಲ್ಲೆಗಳ 18 ಜನ ಶಾಸಕರು ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ನೀಡುತ್ತೇವೆ.  ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಯೋಜನೆಗೆ ಬೇಕಾದ ಹಣವನ್ನು ಬಿಡುಗಡೆ ಮಾಡಬೇಕು.  ಆಲಮಟ್ಟಿ ಜಲಾಶಯ ಎತ್ತರದಿಂದ ಸಂತ್ರಸರಾಗುವ 22 ಗ್ರಾಮಸ್ಥರು ಮತ್ತು 1.30 ಲಕ್ಷ ಎಕರೆ ರೈತರ ಜಮೀನು ಭೂಸ್ವಾಧೀನಕ್ಕೆ ಏಕರೂಪ ಪರಿಹಾರ ನೀಡಬೇಕು.  ನ್ಯಾಯಯುತವಾಗಿರುವ ಈ ಯೋಜನೆಯನ್ನು ಕಾಲಮಿತಿಯಲ್ಲಿ ಮಾಡಬೇಕು.  ಸಿಎಂ ಗುರುವಾರ ಸಂಜೆ 4 ಗಂಟೆಗೆ ಈ ಭಾಗದ ಶಾಸಕರು, ಸಂಸದರ ಸಭೆ ಕರೆದಿದ್ದಾರೆ. ನಾವೆಲ್ಲ ಶಾಸಕರು ಪಕ್ಷಾತೀತವಾಗಿ ಸಂತ್ರಸ್ತರ ದನಿಯಾಗಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಿದ್ದೇವೆ. ಅಲ್ಲದೇ, ಪ್ರಾಮಾಣಿಕವಾಗಿ ಸರಕಾರದ ಗಮನ ಸೆಳೆಯುತ್ತೇವೆ.  ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.   

ನಾನಾ ಸ್ವಾಮೀಜಿಗಳು, ಬಾಗಲಕೋಟೆ ಜಿಲ್ಲೆಯ ಮಾಜಿ ಶಾಸಕರು, ರೈತ ಮುಖಂಡರು, ಸಂತ್ರಸ್ತರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ನಾನಾ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸುನೀಲಗೌಡ ಪಾಟೀಲ ಪಾಲ್ಗೊಂಡರು.