ನವದೆಹಲಿ, ಫೆ.26 ; ಹೊಸ ಪೌರತ್ವ ಕಾನೂನಿನ ಕುರಿತು ಈಶಾನ್ಯ ದೆಹಲಿಯಲ್ಲಿ ಭಾನುವಾರದಿಂದ ನಡೆಯುತ್ತಿರುವ ಸರಣಿ ಹಿಂಸಾತ್ಮಕ ಘರ್ಷಣೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 20ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಗರು ಮತ್ತು ಅದರ ವಿರುದ್ಧದ ಪ್ರತಿಭಟನಕಾರರ ನಡುವಿನ ಘರ್ಷಣೆಯ ತಾರಕಕ್ಕೇರಿದ್ದು, ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ಕಳೆದ 48 ಗಂಟೆಗಳಲ್ಲಿ ಸುಮಾರು 130 ನಾಗರಿಕರು ಮತ್ತು 56 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಈಶಾನ್ಯ ದೆಹಲಿಯ ಚಂದ್ ಬಾಗ್ ಪ್ರದೇಶದಲ್ಲಿ ಮಂಗಳವಾರ ಸಂಜೆ ಘರ್ಷಣೆ ಮತ್ತು ಕಲ್ಲು ತೂರಾಟ ವರದಿಯಾಗಿದೆ.
ನಿನ್ನೆ ತಡರಾತ್ರಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಘರ್ಷಣೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾದರು. ದೋವಲ್ ಅವರು ಸೀಲಾಂಪುರ್, ಜಾಫ್ರಾಬಾದ್, ಮೌಜ್ಪುರ್ ಮತ್ತು ಗೋಕುಲ್ ಪುರಿ ಚೌಕ್ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ಪಡೆದರು.
ಸಿಎಎ ಪರ ಮತ್ತು ವಿರೋಧಿ ಪ್ರತಿಭಟನಕಾರರ ಗುಂಪುಗಳು, ಮನೆಗಳನ್ನು, ಅಂಗಡಿಗಳನ್ನು ಮತ್ತು ವಾಹನಗಳನ್ನು ಸುಟ್ಟುಹಾಕಿದ್ದು, ಚಂದ್ ಬಾಗ್ ಮತ್ತು ಭಜನ್ಪುರದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಹಿಂಸಾಚಾರದ ದೃಷ್ಟಿಯಿಂದ, ಈಶಾನ್ಯ ದೆಹಲಿಯ ಶಾಲೆಗಳಲ್ಲಿ (ಫೆಬ್ರವರಿ 26) ಇಂದು ನಡೆಯಬೇಕಿದ್ದ ಸಿಬಿಎಸ್ಇ ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಆಂತರಿಕ ಶಾಲಾ ಪರೀಕ್ಷೆಗಳು ರದ್ದಾಗಿರುವುದರಿಂದ ಹಿಂಸಾಚಾರ ಪೀಡಿತ ಈಶಾನ್ಯ ದೆಹಲಿಯ ಶಾಲೆಗಳು ಬುಧವಾರ ರಜೆ ಘೋಷಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ತಡವಾಗಿ ತಿಳಿಸಿದ್ದಾರೆ.
ಇಂದು ಮತ್ತೊಂದು ಬೆಳವಣಿಗೆಯಾಗಿದ್ದು, ಹಿರಿಯ ಐಪಿಎಸ್ ಎಸ್.ಎನ್. ಶ್ರೀವಾಸ್ತವ ಅವರನ್ನು ದೆಹಲಿ ಪೊಲೀಸರ ವಿಶೇಷ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ) ನೇಮಿಸಲಾಗಿದೆ.