ದೆಹಲಿ ಚುನಾವಣೆ: ಕಾಂಗ್ರೆಸ್‌ನ 40 ಮಂದಿ ಸ್ಟಾರ್‌ ಪ್ರಚಾರಕರ ಪಟ್ಟಿ ಪ್ರಕಟ

ನವದೆಹಲಿ, ಜನವರಿ 22 ,ಫೆಬ್ರವರಿ 8 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಪಕ್ಷದ  ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ  ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್  ಬುಧವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಪ್ರಧಾನ  ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಈ ಪಟ್ಟಿ ಬಿಡುಗಡೆ ಮಾಡಿದ್ದಾರೆ.  ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಹಿರಿಯ  ಮುಖಂಡ ಗುಲಾಮ್ ನಬಿ ಆಜಾದ್, ಪಿ.ಸಿ. ಚಾಕೊ ಅವರು ಪಕ್ಷದ ಪ್ರಚಾರದ ಉಸ್ತುವಾರಿ  ವಹಿಸಲಿದ್ದಾರೆ.ಈ ಪಟ್ಟಿಯಲ್ಲಿ ಪಂಜಾಬ್  ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಶಶಿ ತರೂರ್, ನವಜೋತ್ ಸಿಂಗ್ ಸಿಧು, ಶತ್ರುಘ್ನ ಸಿನ್ಹಾ, ಅಶೋಕ್ ಗೆಹ್ಲೋಟ್, ಭೂಪೇಶ್ ಬಗೇಲ್, ಕಮಲ್ ನಾಥ್, ವಿ ನಾರಾಯಣಸಾಮಿ, ಸಚಿನ್  ಪೈಲಟ್, ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಇದ್ದಾರೆ.

ದೆಹಲಿ ಕಾಂಗ್ರೆಸ್  ಮುಖ್ಯಸ್ಥ ಸುಭಾಷ್ ಚೋಪ್ರಾ, ಅಜಯ್ ಮಾಕೆನ್, ಮೀರಾ ಕುಮಾರ್, ಜೆ.ಪಿ ಅಗರ್ವಾಲ್, ರಾಜ್  ಬಬ್ಬರ್, ಕಪಿಲ್ ಸಿಬಲ್, ಭೂಪಿಂದರ್ ಸಿಂಗ್ ಹೂಡಾ, ರಂದೀಪ್ ಸಿಂಗ್ ಸುರ್ಜೆವಾಲಾ,  ಕೀರ್ತಿ ಆಜಾದ್, ಸುಷ್ಮಿತಾ ದೇವ್, ಮತ್ತು ಉದಿತ್ ರಾಜ್ ಕೂಡ ಈ ಪಟ್ಟಿಯಲ್ಲಿ ಇದ್ದಾರೆ.ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಸ್ತಾ ಮುಖರ್ಜಿ ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ನವದೆಹಲಿ ಕ್ಷೇತ್ರದಿಂದ ರೋಮೇಶ್ ಸಭರ್ವಾಲ್ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದೆ.  ಮತ ಎಣಿಕೆ ಫೆಬ್ರವರಿ 11 ರಂದು ನಡೆಯಲಿದೆ.ದೆಹಲಿ ವಿಧಾನಸಭಾ ಚುನಾವಣೆ 2020 ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. 2015 ರ ಚುನಾವಣೆಯಲ್ಲಿ ಎಎಪಿ 67 ಸ್ಥಾನಗಳನ್ನು ಗೆದ್ದರೆ, ಬಿಜೆಪಿಗೆ ಉಳಿದ ಮೂರು ಸ್ಥಾನಗಳು ಲಭಿಸಿದ್ದವು. ಆದರೆ ಕಾಂಗ್ರೆಸ್‌ಗೆ ಒಂದು ಸ್ಥಾನವೂ ಲಭಿಸಿರಲಿಲ್ಲ.