ದೆಹಲಿ ಚುನಾವಣೆ: ಸಂಜೆ 3 ಗಂಟೆ ವೇಳೆಗೆ ಶೇ 30ರಷ್ಟು ಮತದಾನ

ನವದೆಹಲಿ, ಫೆ 8:  ಬಿಗಿ ಭದ್ರತೆ ನಡುವೆ ಇಂದು ಬೆಳಿಗ್ಗೆ 8ಗಂಟೆಗೆ ಎಲ್ಲ 70 ಕ್ಷೇತ್ರಗಳಲ್ಲಿ ಆರಂಭವಾದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸಂಜೆ 3 ಗಂಟೆ ವೇಳೆಗೆ ಶೇ 30.11ರಷ್ಟು ಮತದಾನವಾಗಿದೆ.

ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸೇರಿ ಒಟ್ಟು 672 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉತ್ತರ ದೆಹಲಿಯ ನರೇಲಾದಲ್ಲಿ ಶೇ 35.28, ರೋಹಿಣಿ ಶೇ 30.20, ಶಕುರ್ ಬಸ್ತಿ ಶೇ 24.68  ಮತ್ತು ಮಾಡೆಲ್ ಟೌನ್ ನಲ್ಲಿ ಶೇ 27.59ರಷ್ಟು ಮತದಾನವಾಗಿದೆ. ಈಶಾನ್ಯ ದೆಹಲಿಯಲ್ಲಿ, ಸೀಲಾಂಪುರ ಶೇ 33.73, ಗೋಕಲ್ಪುರ (ಎಸ್‌ಸಿ) ಶೇ 35.78ರಷ್ಟು ಮತದಾನವಾಗಿದೆ.

ದಕ್ಷಿಣ ದೆಹಲಿಯ ಮಾಲ್ವಿಯಾ ನಗರದಲ್ಲಿ ಶೇ 27.85, ಛಾತರ್ ಪುರ ಶೇ 32.70, .ಪೂರ್ವ ದೆಹಲಿಯಲ್ಲಿ, ತ್ರಿಲೋಕ್‌ಪುರಿ (ಎಸ್‌ಸಿ) ಶೇ 29.56 ಮತ್ತು ಲಕ್ಷ್ಮಿ ನಗರ ಶೇ 29.42 ರಷ್ಟು ಮತದಾನವಾಗಿದೆ.

ರಾಷ್ಟ್ರ ರಾಜಧಾನಿಯ ಪಶ್ಚಿಮ ಭಾಗದ ರಜೌರಿ ಗಾರ್ಡನ್ ನಲ್ಲಿ ಶೇ 26.58  ಮತ್ತು ಜನಕ್‌ಪುರಿಯಲ್ಲಿ ಶೇ 31.21 ರಷ್ಟು ಮತದಾನ ದಾಖಲಾಗಿದೆ.

ಕೆಲವು ತಜ್ಞರ ಪ್ರಕಾರ, ಈ ಚುನಾವಣೆಯ ಮತದಾನದ ಪ್ರಮಾಣ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ಇದು ಯಾವುದೇ ಅಭ್ಯರ್ಥಿಯ ರಾಜಕೀಯ ಭವಿಷ್ಯವನ್ನು ಬದಲಾಯಿಸಬಹುದಾಗಿದೆ. ಶೀತ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಮತದಾರರು ತಮ್ಮ ಹಕ್ಕು ಚಲಾಯಿಸಲು ರಾಷ್ಟ್ರ ರಾಜಧಾನಿಯಾದ್ಯಂತ ಹಲವಾರು ಮತದಾನ ಕೇಂದ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮುಂಚಿತವಾಗಿ ಸಾಲುಗಟ್ಟಿ ನಿಂತಿದ್ದರು. ಹಲವಾರು ಮತದಾನ ಕೇಂದ್ರಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ.

ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ನಗರದಾದ್ಯಂತ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನೂ ನಿಯೋಜಿಸಲಾಗಿದೆ. ವಿಶೇಷ ಮತದಾನ ಕರ್ತವ್ಯಕ್ಕಾಗಿ ವಿವಿಧ ಘಟಕಗಳ ಹಿರಿಯ ಪೊಲೀಸ್ ಅಧಿಕಾರಿಗಳನ್ನು ರಚಿಸಲಾಗಿದೆ.

ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ಮತ್ತು ಅಶಾಂತಿ ನೆಲೆಸಿದ್ದ  ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸರು ಭದ್ರತೆಗೆ ವಿಶೇಷ ಒತ್ತು ನೀಡಿದ್ದಾರೆ. ಡ್ರೋನ್‌ಗಳನ್ನು ಬಳಸಿ ಅನೇಕ ಪ್ರದೇಶಗಳ ಮೇಲೆ ಕಣ್ಗಾವಲು ಇಡಲಾಗಿದೆ. ಮತದಾನ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದ್ದು, ಫೆ 11 ರಂದು ಫಲಿತಾಂಶ ಪ್ರಕಟವಾಗಲಿದೆ.