ನವದೆಹಲಿ, ಫೆ 8 ,ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಾರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ.70 ಸ್ಥಾನಗಳಿಗೆ 672 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವದೆಹಲಿ ಕ್ಷೇತ್ರದಿಂದ ಗರಿಷ್ಠ 28 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ, ಕನಿಷ್ಠ ನಾಲ್ಕು ಜನರು ಪಟೇಲ್ ನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.ಒಂದು ಕೋಟಿ 47 ಲಕ್ಷ ಮತದಾರರು ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದು ಪಾರದರ್ಶಕ, ನ್ಯಾಯಯುತ ಮತ್ತು ಶಾಂತಿಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಸಕಲ ವ್ಯವಸ್ಥೆ ಮಾಡಲಾಗಿದೆ. ದೆಹಲಿ ಪೊಲೀಸರು ಚುನಾವಣಾ ಪ್ರಕ್ರಿಯೆಗಾಗಿ 42 ಸಾವಿರ ಸಿಬ್ಬಂದಿ, 190 ಅರೆಸೈನಿಕ ಪಡೆ ಮತ್ತು 19 ಸಾವಿರ ಗೃಹರಕ್ಷಕರನ್ನು ಭದ್ರತೆಗಾಗಿ ನಿಯೋಜಿಸಿದ್ದಾರೆ ಮತದಾರರ ಅನುಕೂಲಕ್ಕಾಗಿ ಚುನಾವಣಾ ಆಯೋಗ ಅಗತ್ಯ ವ್ಯವಸ್ಥೆ ಮಾಡಿದ್ದು ಎರಡು ಲಕ್ಷ 32 ಸಾವಿರಕ್ಕೂ ಹೆಚ್ಚು ಮತದಾರರು ಇದೇ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಲಿದ್ದಾರೆ ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ ಡಾ.ರಣಬೀರ್ ಸಿಂಗ್ ಹೇಳಿದ್ದಾರೆ ಮತದಾನದ ಸಿಬ್ಬಂದಿ ಮತ್ತು ಇತರರು ಸಮಯಕ್ಕೆ ಸರಿಯಾಗಿ ತಮ್ಮ ಗಮ್ಯಸ್ಥಾನವನ್ನು ತಲುಪಲು ಅನುಕೂಲವಾಗಲು ದೆಹಲಿ ಮೆಟ್ರೋ ಸೇವೆಗಳು ಇಂದು ಬೆಳಗ್ಗೆ 4 ಗಂಟೆಗೆ ಆರಂಭಿಸಲಾಗಿತ್ತು. ಮಂಗಳವಾರ ಮತ ಎಣಿಕೆ ನಡೆಯಲಿದೆ.