ನವದೆಹಲಿ, ಫೆ 8, ದೆಹಲಿ ವಿಧಾನಸಭಾ ಚುನಾವಣೆಗೆ ರಾಷ್ಟ್ರಪತಿ ಭವನದಲ್ಲಿ ಸ್ಥಾಪಿಸಲಾಗಿದ್ದ ವಿಶೇಷ ಮತಗಟ್ಟೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ಮತದಾನ ಮಾಡಿದರು. ರಾಷ್ಟ್ರಪತಿ ಭವನ ಆವರಣದಲ್ಲಿನ ಡಾ ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರಪತಿಯವರು, ಅವರ ಪತ್ನಿ ಸವಿತಾ ಕೋವಿಂದ್ ತಮ್ಮ ಹಕ್ಕು ಚಲಾಯಿಸಿದರು.ಮತದಾನ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ.ಸುಮಾರು 1.47 ಕೋಟಿ ಮತದಾರರು ಇಂದು 672 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಪ್ರತಿ ಕ್ಷೇತ್ರದಲ್ಲೂ ಒಂದು ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. ಚುನಾವಣೆಯ ಮತ ಎಣಿಕೆ ಫೆ 11ರಂದು ನಡೆಯಲಿದೆ.