ದೆಹಲಿ ವಿಧಾನಸಭಾ ಚುನಾವಣೆ: ಬಿಜೆಪಿಯ 57 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ನವದೆಹಲಿ, ಜ17:      ಮುಂದಿನ ತಿಂಗಳ 8ರಂದು ನಡೆಯುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) 70 ಅಭ್ಯರ್ಥಿಗಳ ಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದ ಎರಡು ದಿನದ ನಂತರ ಶುಕ್ರವಾರ ಬಿಜೆಪಿ 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.   

ಆದರೆ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹ್ಯಾಟ್ರಿಕ್ ಭಾರಿಸಲು ಹೊರಟಿರುವ ನವದೆಹಲಿ ಹಾಗೂ ಪ್ರತಿಷ್ಠಿತ ಕ್ಷೇತ್ರಗಳು ಸೇರಿದಂತೆ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿಲ್ಲ.   

ಬಿಜೆಪಿ ಮೊದಲ ಪಟ್ಟಿ ನಾಲ್ವರು ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿಗೆ ಸೇರಿದ 11 ಅಭ್ಯರ್ಥಿಗಳನ್ನು  ಒಳಗೊಂಡಿದೆ ಎಂದು ದೆಹಲಿ ಬಿಜೆಪಿ ಘಟಕ ಅಧ್ಯಕ್ಷ ಮನೋಜ್ ತಿವಾರಿ ತಿಳಿಸಿದ್ದಾರೆ.   

ಆಮ್ ಆದ್ಮಿ ಪಕ್ಷದ ಭದ್ರಕೋಟೆ ಎನಿಸಿದ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಪರ್ಧಿಸಿರುವ ಪೂರ್ವ ದೆಹಲಿಯ ಪತ್ಪರ್ಗಂಜ್ ಕ್ಷೇತ್ರದಲ್ಲಿ ಬಿಜೆಪಿ, ರವಿ ನೇಗಿಯನ್ನು ಕಣಕ್ಕಿಳಿಸಿದೆ.  

ಇತ್ತೀಚೆಗೆ ಬಿಜೆಪಿ ಸೇರಿದ್ದ ಎಎಪಿ ಬಂಡಾಯ ನಾಯಕ ಕಪಿಲ್ ಮಿಶ್ರಾ ಅವರನ್ನು ಮಾಡಲ್ ಟೌನ್ ಕ್ಷೇತ್ರದಿಂದ ಕಣಕ್ಕಿಳಿಸಿದ್ದರೆ, ದೆಹಲಿ ಬಿಜೆಪಿಯ ಹಳೆಯ ಮುಖ ವಿಜೇಂದ್ರ ಗುಪ್ತಾ ಅವರನ್ನು ರೋಹಿನಿ ಕ್ಷೇತ್ರದಿಂದ, ಶಾಲಿಮರ್ ಬಾಗ್ ನಿಂದ ರೇಖಾ ಗುಪ್ತ, ಚಾಂದಿನಿ ಚೌಕ್ ನಿಂದ ಸುಮನ್ ಕುಮಾರ್ ಗುಪ್ತಾ ಅವರನ್ನು ಕಣಕ್ಕಿಳಿಸಲಾಗಿದೆ.  

ಬಿಜೆಪಿ ಹಿರಿಯ ನಾಯಕ ಆರ್ ಪಿ ಸಿಂಗ್ ಅವರು ಆಮ್ ಆದ್ಮಿ ಪಕ್ಷದ ಯುವ ನಾಯಕ ರಾಘವ್ ಚಾಧ ಅವರನ್ನು ರಾಜೇಂದ್ರ ನಗರ ಕ್ಷೇತ್ರದಲ್ಲಿ ಎದುರಿಸಲಿದ್ದಾರೆ.