ಬೆಂಗಳೂರು, ಜ.19 : ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸ್ವಿಟ್ಜರ್ಲ್ಯಾನ್ಡ್ ದಾವೋಸ್ಗೆ ಪ್ರಯಾಣ ಬೆಳೆಸಲಿದ್ದಾರೆ.
ಮುಖ್ಯಮಂತ್ರಿಯೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಆಯುಕ್ತ ಗುಂಜಾನ್ ಕೃಷ್ಣ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಎಂ.ಬಿ.ಮರಂಕಲ್, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಪಿ. ರುದ್ರಪ್ಪಯ್ಯ ತೆರಳಲಿದ್ದಾರೆ. ಇಂದಿನಿಂದ ಒಟ್ಟು ಆರು ದಿನಗಳ ಕಾಲ ಮುಖ್ಯಮಂತ್ರಿ ಮತ್ತು ಈ ತಂಡ ದಾವೋಸ್ನಲ್ಲಿ ಇರಲಿದೆ.
ಬೆಳಗ್ಗೆ 10.25ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಿ, ಅಲ್ಲಿಂದ ಜುರಿಚ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಮಾರ್ಗವಾಗಿ ದಾವೋಸ್ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಳೆ ನಡೆಯಲಿರುವ ವಿಶ್ವ ಆರ್ಥಿಕ ವಾರ್ಷಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ನಿಯೋಗ ಪಾಲ್ಗೊಳ್ಳಲಿದೆ. ನಂತರ ಕರ್ನಾಟಕದಲ್ಲಿ ಹೂಡಿಕೆಗಾಗಿ ಜಾಗತಿಕ ಹೂಡಿಕೆದಾರರೊಂದಿಗೆ ಮುಖ್ಯಮಂತ್ರಿ ಮತ್ತು ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ದಿನಾಂಕ 24ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ದಾವೋಸ್ಗೆ ಹೊರಟ ಮುಖ್ಯಮಂತ್ರಿಯವರನ್ನು ಸಚಿವ ಸಂಪುಟದ ಸದಸ್ಯರು ಇಂದು ಬೆಳಗ್ಗೆ ಅವರ ನಿವಾಸಕ್ಕೆ ತೆರಳಿ ಶುಭಕೋರಿದರು.