ಸೋಲಿಸುವವನು, ಗೆಲ್ಲಿಸುವವನು ಮೇಲಿದ್ದಾನೆ: ಅನರ್ಹ ಶಾಸಕ ಕೆ.ಸುಧಾಕರ್

ಬೆಂಗಳೂರು, ಆ 3  ಅನರ್ಹ ಶಾಸಕ ಡಾ.ಕೆ.ಸುಧಾಕರ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ತಾವು ಇಲ್ಲಿರಲಿಲ್ಲ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ.  ಯಾವುದೇ ರಾಜಕೀಯ ಮಾತುಕತೆ ನಡೆದಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಹಾಗೂ ಅನುದಾನ ಬಿಡುಗಡೆ ಬಗ್ಗೆ ಚಚರ್ೆ ನಡೆಸಿದ್ದೇನೆ. ಅವರು ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ತಮಗಿದೆ ಎಂದರು.  ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾದರೂ ಹಿಂದಿನ ಸರ್ಕಾರದವರು ಅನುದಾನ ಬಿಡುಗಡೆ ಮಾಡಿರಲಿಲ್ಲ. ಈಗ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ಕುರಿತು ತನಗೆ ಯಾವುದೇ ಮಾಹಿತಿಯಿಲ್ಲ. ಬಿಜೆಪಿ ಸೇರ್ಪಡೆ ಕುರಿತು ಕ್ಷೇತ್ರದ ಜನರ ಜತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸುಧಾಕರ್ ಹೇಳಿದರು. ಉಪಚುನಾವಣೆಯಲ್ಲಿ ಬಂಡಾಯ ಶಾಸಕರನ್ನು ಸೋಲಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಯಾರೋ ಬಂದು ಬೊಬ್ಬೆ ಹೊಡೆದರೆ ಜನ ಕೇಳಬೇಕಲ್ಲ. ಎಲ್ಲಿಂದಲೋ ಬಂದು ಕಾಲರ್ ಎಗರಿ ಹಾಕಿಕೊಂಡು ಹೋದರೆ ಜನ ಕೇಳುವುದಿಲ್ಲ. ಅಂತಹವರಿಗೆ ಜನ ಓಟು ಹಾಕುವುದಿಲ್ಲ. ನಮ್ಮನ್ನು ಸೋಲಿಸುವುದು, ಗೆಲ್ಲಿಸುವುದು ಜನರೇ ಹೊರತು ನಾಯಕರಲ್ಲ. ಸೋಲಿಸೋನು, ಗೆಲ್ಲಿಸುವವನು  ಮೇಲಿದ್ದಾನೆ ಎಂದು ಸೂಚ್ಯವಾಗಿ ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಅತಿರಥ ಮಹಾರಥರೆಲ್ಲ ಪ್ರಚಾರ ಮಾಡಿದರೂ ರಾಜ್ಯದಲ್ಲಿ ಕಾಂಗ್ರೆಸ್ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತು, ಇದನ್ನು ನಮ್ಮ ವಿರುದ್ಧ ಆರೋಪ ಮಾಡುತ್ತಿರುವವರು ಮರೆಯಬಾರದು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸ್ಪೀಕರ್ ರಮೇಶ್ ಕುಮಾರ್ ಸಂವಿಧಾನಕ್ಕೆ ವಿರುದ್ಧವಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ. ನಾವು ಕಾನೂನು ಹೋರಾಟ ನಡೆಸುತ್ತೇವೆ. ಸುಪ್ರೀಂ ಕೋರ್ಟ್ನ್ಲ್ಲಿ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ ಅವರು, ಮೌಲ್ಯಗಳ ಪ್ರತಿಪಾದಕರಂತೆ ರಮೇಶ್ ಕುಮಾರ್ ನಟಿಸುತ್ತಿದ್ದಾರೆ. ಅವರ ಆದೇಶ ಅನೈತಿಕವಾದದ್ದು. ಅದನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದೇವೆ. ನ್ಯಾಯ ವ್ಯವಸ್ಥೆಯಲ್ಲಿ ತಮಗೆ ನಂಬಿಕೆ ಇದೆ. ಇಂಥವರಿಂದ ಸಂವಿಧಾನಕ್ಕೆ ಅಪಚಾರ ಆಗುತ್ತಿದೆ. ತೀಪು ನಿಧಾನವಾದರೂ ಪರವಾಗಿಲ್ಲ, ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು