ಲಕ್ನೋ, ಸೆ 17 ರಾಜಸ್ಥಾನದಲ್ಲಿ ತಮ್ಮ ಪಕ್ಷದ ಆರು ವಿಧಾನಸಭಾ ಸದಸ್ಯರು ಆಡಳಿತಾ ರೂಢ ಕಾಂಗ್ರೆಸ್ ಗೆ ಪಕ್ಷಾಂತರಗೊಂಡಿರುವುದಕ್ಕೆ ಕುಪಿತಗೊಂಡಿರುವ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್ ವಿಶ್ವಾಸಕ್ಕೆ ಯೋಗ್ಯವಲ್ಲದ ಪಕ್ಷ ಎಂದು ನಿಂದಿಸಿದ್ದಾರೆ.
ಬಿಎಸ್ಪಿ ಶಾಸಕರನ್ನು ಪುಸಲಾಯಿಸುವ ಮೂಲಕ ಕಾಂಗ್ರೆಸ್ ವಿಶ್ವಾಸಕ್ಕೆ ಯೋಗ್ಯವಲ್ಲದ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ. ರಾಜಸ್ಥಾನ ಕಾಂಗ್ರೆಸ್ ಸರ್ಕಾರಕ್ಕೆ ಬಿಎಸ್ಪಿ ಬೇಷರತ್ ಬೆಂಬಲ ಘೋಷಿಸಿದ್ದರೂ, ಪಕ್ಷದ ಶಾಸಕರನ್ನು ತನ್ನತ್ತ ಸೆಳೆದುಕೊಂಡಿರುವುದು ವಿಶ್ವಾಸ ದ್ರೋಹ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ
ಕಾಂಗ್ರೆಸ್ ತನ್ನ ಎದುರಾಳಿಗಳೊಂದಿಗೆ ಹೋರಾಟ ಮಾಡುವ ಬದಲು, ತನ್ನನ್ನು ಬೆಂಬಲಿಸಿದ ಹಾಗೂ ಸಹಾಯ ಮಾಡಿದ ರಾಜಕೀಯ ಪಕ್ಷಗಳನ್ನು ಹಾಳುಮಾಡಿಕೊಂಡುಬಂದಿದೆ. ಕಾಂಗ್ರೆಸ್, ದಲಿತರು, ಬುಡಕಟ್ಟುಜನರು ಹಾಗೂ ಇತರ ಹಿಂದುಳಿದ ವರ್ಗಗಳ ವಿರೋಧಿಯಾಗಿದ್ದು, ಹಿಂದುಳಿದ ವರ್ಗಗಳ ಹಕ್ಕುಗಳ ಬಗ್ಗೆ ಕಾಂಗ್ರೆಸ್ ಪಕ್ಷ ಗಂಭೀರ ನಿಲುವುಹೊಂದಿಲ್ಲ ಎಂದು ಮಾಯಾವತಿ ದೂರಿದ್ದಾರೆ
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಿಗೆ ಕಾಂಗ್ರೆಸ್ ವಿರುದ್ಧವಾಗಿದ್ಧ ಕಾರಣಕ್ಕಾಗಿಯೇ, ದೇಶದ ಮೊದಲ ಕಾನೂನು ಸಚಿವ ಸ್ಥಾನಕ್ಕೆ ಡಾ. ಅಂಬೇಡ್ಕರ್ ರಾಜೀನಾಮೆ ಸಲ್ಲಿಸಿದ್ದರು ಎಂದು ಹೇಳಿದ್ದಾರೆ.
ಲೋಕಸಭೆಗೆ ಚುನಾಯಿತರಾಗಲು ಬಾಬಾ ಸಾಹೇಬ್ ಅವರಿಗೆ ಕಾಂಗ್ರೆಸ್ ಅವಕಾಶ ಮಾಡಿಕೊಡಲೇಇಲ್ಲ. ಭಾರತರತ್ನ ಪುರಸ್ಕಾರವನ್ನೂ ನೀಡಲಿಲ್ಲ. ಇದು ಅತ್ಯಂತ ನಾಚಿಕೆಗೇಡು ಹಾಗೂ ನೋವಿನ ಸಂಗತಿ ಮಾಯಾವತಿ ಹೇಳಿದ್ದಾರೆ.
ಸೋಮವಾರ ರಾತ್ರಿ ರಾಜಸ್ಥಾನದ ಎಲ್ಲಾ ಆರು ಮಂದಿ ಬಿಎಸ್ಪಿ ಶಾಸಕರು ರಾಜ್ಯ ವಿಧಾನಸಭೆ ಸ್ಪೀಕರ್ ಸಿ ಪಿ ಜೋಷಿ ಅವರಿಗೆ ಪತ್ರ ಬರೆದು, ಕಾಂಗ್ರೆಸ್ ಶಾಸಕಾಂಗ ಪಕ್ಷದೊಂದಿಗೆ ತಮ್ಮನ್ನು ವಿಲೀನಗೊಳಿಸುವಂತೆ ಮನವಿ ಮಾಡಿದ್ದರು. ಶಾಸಕರಾದ ರಾಜೇಂದ್ರ ಸಿಂಗ್ ಗುಧಾ, ಜೋಗೇಂದ್ರ ಸಿಂಗ್ ಅವಾನ, ವಜೀಬ್ ಅಲಿ, ಲಖನ್ ಸಿಂಗ್ ಮೀನಾ, ಸಂದೀಪ್ ಯಾದವ್ ಹಾಗೂ ದೀಪ್ ಚಂದ್ ತಾವು ಕಾಂಗ್ರೆಸ್ ಶಾಸಕಾಂಗ ಪಕ್ಷದೊಂದಿಗೆ ವಿಲೀನಗೊಂಡಿರುವುದಾಗಿ ತಿಳಿಸಿದ್ದರು.