ಗುವಾಹಟಿ, ಅ 27: ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದಕ್ಕೆ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಸ್ಪಷ್ಟ ನಿದರ್ಶನವಾಗಿದೆ ಎಂದು ಅಸ್ಸಾಂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ತರುಣ್ ಗೊಗೊಯ್ ಆರೋಪಿಸಿದ್ದಾರೆ. ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣಾ ಫಲಿತಾಂಶದಿಂದ ಮೋದಿ ವಿಜಯ ಅಜೇಯವಲ್ಲ ಎಂಬುದು ಬಹಿರಂಗವಾಗಿ ಮನವರಿಕೆಯಾಗಿದೆ. ಮೋದಿ ಜನಪ್ರಿಯತೆ ಕಳೆದುಕೊಂಡಿದ್ದಾರೆ. ಜನರನ್ನು ಎಲ್ಲಾ ಕಾಲದಲ್ಲೂ ಭಾವನಾತ್ಮಕವಾಗಿ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದರು. ಲೋಕಸಭಾ ಫಲಿತಾಂಶ ಮತ್ತು ಈ ವಿಧಾನಸಭಾ ಚುನಾವಣೆಗಳ ತುಲನೆ ಮಾಡಿದಾಗ ಕಾಂಗ್ರೆಸ್ ಪ್ರಗತಿ ಸಾಧಿಸಿದ್ದು, ಎಲ್ಲರೂ ಒಟ್ಟಾಗಿ ಸೇರಿ ಶ್ರಮಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಮತ್ತೆ ಉತ್ತಮ ಅವಕಾಶವಿದೆ ಎಂದರು.