ವಿಜಯಪುರ, ಏ. 30, ಕೃಷ್ಣಾ ನದಿ ಇಡೀ ಉತ್ತರ ಕರ್ನಾಟಕದ ಜೀವನದಿಯಾಗಿದ್ದು, ಈ ನೀರಿನ ಸದ್ಭಳಕೆಗಿರುವ ಕಾನೂನು ತೊಡಕುಗಳನ್ನು ನಿವಾರಣೆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಜಿಲ್ಲೆಯ ಆಲಮಟ್ಟಿ ಜಲಾಶಯದ ಪರಿವೀಕ್ಷಣೆ ಮಾಡಿದ ನಂತರ ಅವರು ಮಾಹಿತಿ ಕೊಟ್ಟಿದ್ದಾರೆ. ಆಲಮಟ್ಟಿ ಜಲಾಶಯವನ್ನು 519.6 ಮೀ. ನಿಂದ 524.256 ಮೀ. ವರೆಗೆ ಹಂತ ಹಂತವಾಗಿ ಏರಿಸಬೇಕೆನ್ನುವ ಪ್ರಸ್ತಾಪ ಸರ್ಕಾರದ ಮುಂದಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲು ಚಿಂತನೆ ನಡೆದಿದೆ ಎಂದು ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಜಾರಿಗೆ ಹಣಕಾಸಿನ ಕೊರತೆಯಿಲ್ಲ. ನಾನು ಉತ್ತರ ಕರ್ನಾಟಕದವನಾಗಿದ್ದು, ಈ ಭಾಗದ ಸಮಗ್ರ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಯೋಜನೆ ಪೂರ್ಣಗೊಳಿಸಲು ಹಣಕಾಸಿನ ಕ್ರೋಢೀಕರಣಕ್ಕೂ ಚಿಂತನೆ ನಡೆದಿದೆ ಎಂದರು.
ಇದು ತಮ್ಮ ಅಧ್ಯಯನ ಪ್ರವಾಸವಾಗಿದ್ದು, ಯೋಜನೆಗಳ ಕುರಿತು ಮಾಹಿತಿ ಪಡೆಯಲು ಬಂದಿದ್ದೇನೆ. ಕೊರೋನಾ ಲಾಕ್‌ಡೌನ್ ನಂತರ ಮತ್ತೆ ಈ ಭಾಗಕ್ಕೆ ಬಂದು ಯುಕೆಪಿ ನೀರಾವರಿ ಯೋಜನೆಗಳಿಗೆ ಚುರುಕು ಮುಟ್ಟಿಸುತ್ತೇನೆ. ಅಭಿವೃದ್ಧಿ ಪರ ಯಾವುದೇ ಸಲಹೆಗಳಿಗೂ ಸ್ವಾಗತ. ನೀರಾವರಿ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುವುದೇ ನನ್ನ ಮುಂದಿರುವ ಗುರಿ ಎಂದರು. ತಿಡಗುಂದಿ ಜಲ ಸೇತುವೆ ಇನ್ನೂ ಲೋಕಾರ್ಪಣೆಯಾಗಿಲ್ಲ. ಶಾಸಕರಿಗೆ ಅವರ ಮತಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡುವ ಹಕ್ಕಿದೆ. ಆದರೆ ತಿಡಗುಂದಿ ವಿಷಯದಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ತಿಡಗುಂದಿ ಜಲ ಸೇತುವೆ ಇನ್ನೂ ಲೋಕಾರ್ಪಣೆಯಾಗಿಲ್ಲ ಎಂದರು. ತಿಡಗುಂದಿ ಕಾಲುವೆ ಲೋಕಾರ್ಪಣೆ ವಿಷಯದಲ್ಲಿ ಅಧಿಕಾರಿಗಳು ನಿಯಮವನ್ನು ಉಲ್ಲಂಘಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.