ಮುಂಬೈ 09: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೋಮವಾರ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ವಾರ್ಷಿಕ ಸಮಾವೇಶ ನಡೆಸಲು ಎಂಇಎಸ್‌ಗೆ ಕರ್ನಾಟಕ ಸರ್ಕಾರ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ವೊರ್ಲಿ ಕ್ಷೇತ್ರದ ಶಾಸಕ ಹಾಗೂ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಆದಿತ್ಯ, ಕೇಂದ್ರ ಸರ್ಕಾರಕ್ಕೆ ಈ ಬೇಡಿಕೆ ಇಟ್ಟಿದ್ದಾರೆ.
ವಿಧಾನ ಭವನ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಆದಿತ್ಯ, 'ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಿಂದಾಗಿ ಸಂಭ್ರಮಾಚರಣೆ ನಡೆಯುತ್ತಿದೆ. ಮತ್ತೊಂದೆಡೆ, ಬೆಳಗಾವಿಯ ಪರಿಸ್ಥಿತಿಯನ್ನು ನೋಡಿ. ನೆರೆಯ ಈ ಪ್ರದೇಶದಲ್ಲಿ, ಮರಾಠಿ ಭಾಷಿಕರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ' ಎಂದು ಹೇಳಿದ್ದಾರೆ.
ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಸೇರಿದಂತೆ ಗಡಿಯಲ್ಲಿರುವ ಸುಮಾರು 814 ಗ್ರಾಮಗಳ ಮೇಲಿನ ಹಕ್ಕನ್ನು ಪ್ರತಿಪಾದಿಸುತ್ತಿರುವ ಮಹಾರಾಷ್ಟ್ರ, ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ, ಈ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಬೇಕು ಎಂದು ಒತ್ತಾಯಿಸುತ್ತಿದೆ.
ಬೆಳಗಾವಿಯಲ್ಲಿ ಸಾರ್ವಜನಿಕ ಸಮಾವೇಶ ನಡೆಸಲು ಎಂಇಎಸ್‌ಗೆ ಅನುಮತಿ ನೀಡಬೇಕು ಹಾಗೂ ಅದರಲ್ಲಿ ಭಾಗವಹಿಸಲು ಮಹಾರಾಷ್ಟ್ರ ನಾಯಕರಿಗೆ ಅನುಮತಿಸಬೇಕು ಎಂದು ಈ ಮೊದಲು ಶಿವಸೇನಾ (ಯುಬಿಟಿ) ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿತ್ತು.