ಎಲ್ಲರೊಂದಿಗೆ ಚರ್ಚಿಸಿದ ಬಳಿಕ ಐಪಿಎಲ್ ಬಗ್ಗೆ ನಿರ್ಧಾರ: ಗಂಗೂಲಿ

ಕೊಲ್ಕತ್ತಾ, ಏ.12, ಕೊರೊನಾ ವೈರಸ್‌ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಇತರ ಅಧಿಕಾರಿಗಳೊಂದಿಗೆ ಚರ್ಚಿಸಿ ಕೈಗೊಳ್ಳಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರಭ್ ಗಂಗೂಲಿ ತಿಳಿಸಿದ್ದಾರೆ.ಮಾರ್ಚ್ 29 ರಿಂದ ಐಪಿಎಲ್ ನಡೆಯಬೇಕಿತ್ತು ಆದರೆ ಕೊರೊನಾದ ಭೀತಿಯಿಂದಾಗಿ ಭಾರತ ಸರ್ಕಾರವು ಎಲ್ಲಾ ವೀಸಾಗಳನ್ನು ಅಮಾನತುಗೊಳಿಸಿ ವಿದೇಶಿ ಆಟಗಾರರನ್ನು ಭಾರತಕ್ಕೆ ಭೇಟಿ ನೀಡುವುದನ್ನು ನಿಷೇಧಿಸಿದೆ. ಬಿಸಿಸಿಐ ಏಪ್ರಿಲ್ 15 ರವರೆಗೆ ಐಪಿಎಲ್ ಅನ್ನು ರದ್ದು ಗೊಳಿಸಿತ್ತು.
ಕೊರೊನಾ ಭೀತಿಯಿಂದಾಗಿ, ಭಾರತ ಸರ್ಕಾರವು ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದು, ಇದು ಏಪ್ರಿಲ್ 14 ರವರೆಗೆ ಇರುತ್ತದೆ ಆದರೆ ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಬಹುದು.ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಒಡಿಶಾ ಮತ್ತು ಪಂಜಾಬ್ ಸರ್ಕಾರವು ಏಪ್ರಿಲ್ 30 ರವರೆಗೆ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಿದೆ ಮತ್ತು ಐಪಿಎಲ್ ನಡೆಯುವ ಸಾಧ್ಯತೆ ಕಡಿಮೆ ಆಗಿದೆ."ಸೋಮವಾರ ಇತರ ಬಿಸಿಸಿಐ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರವೇ ನಾನು ಈ ಬಗ್ಗೆ ಏನಾದರೂ ಹೇಳಲು ಸಾಧ್ಯವಾಗುತ್ತದೆ. ಈ ಪರಿಸ್ಥಿತಿಯನ್ನು ನೋಡಿದರೆ, ಟೂರ್ನಿಗೆ ಅನುಕೂಲಕರ ವಾತಾವರಣ ಇಲ್ಲ ಎಂಬುದು ತಿಳಿಯುತ್ತದೆ: ಎಂದು ಗಂಗೂಲಿ ಹೇಳಿದ್ದಾರೆ."ಇದು ಭಯಾನಕ ಪರಿಸ್ಥಿತಿ. ನನ್ನ 46 ವರ್ಷಗಳ ಜೀವನದಲ್ಲಿ ಇಂತಹ ಅನುಭವವನ್ನು ಹೊಂದಿಲ್ಲ. ಜಗತ್ತು ಕೂಡ ಅಂತಹ ಸಂದರ್ಭಗಳನ್ನು ನೋಡಿರಲಿಲ್ಲ ಮತ್ತು ಅಂತಹ ಅನುಭವವನ್ನು ಮತ್ತೆ ಯಾರೂ ಅನುಭವಿಸಲು ಬಯಸುವುದಿಲ್ಲ. ಮುಂದಿನ ಎರಡು ವಾರಗಳಲ್ಲಿ ಎಷ್ಟು ಜನರು ಸಾಯುತ್ತಾರೆ ಎಂದು ಇಡೀ ಜಗತ್ತು ಯೋಚಿಸುತ್ತಿದೆ. ಇದು ಭಯ ಹುಟ್ಟಿಸುತ್ತದೆ" ಎಂದಿದ್ದಾರೆ. “ಲಾಕ್ ಡೌನ್ ಸಮಯದಲ್ಲಿ ನಾನು ನನ್ನ ಮನೆಯಲ್ಲಿ ಕುಟುಂಬದೊಂದಿಗೆ ಇದ್ದೇನೆ. ಅಂತಹ ಅವಕಾಶ ವಿರಳವಾಗಿ ಬರುತ್ತದೆ ಮತ್ತು ಅದು ನನ್ನ ಜೀವನವನ್ನು ಸ್ವಲ್ಪ ಬದಲಿಸಿದೆ. ಈ ಸಮಯದಲ್ಲಿ ನಾನು ಬಿಸಿಸಿಐ ಮತ್ತು ಐಸಿಸಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡುತ್ತೇನೆ” ಎಂದು ಗಂಗೂಲಿ ತಿಳಿಸಿದ್ದಾರೆ.